ಬೆಂಗಳೂರು: ಮಲ್ಲೇಶ್ವರದಲ್ಲಿರುವ ‘ಈಟ್ ರಾಜಾ’ ಹೆಸರಿನ ಪ್ಲಾಸ್ಟಿಕ್‌ರಹಿತ ಜ್ಯೂಸ್ ಅಂಗಡಿ, ಜ್ಯೂಸ್ ಸಿದ್ಧಪಡಿಸುವ ಮತ್ತು ಸೇವಿಸುವ ಶೈಲಿಗಳಿಂದ ಜನಾಕರ್ಷಣೆ ಪಡೆದಿದೆ.
ಇಲ್ಲಿ ನೀರಿನ ಬಾಟಲಿ ಮಾರಾಟಕ್ಕಿಲ್ಲ. ನೋ ಪ್ಲಾಸ್ಟಿಕ್ ಸ್ಟ್ರಾ. ಒಂದು ಸಿಗರೇಟ್=ಒಂದು ಜ್ಯೂಸ್’ ಹೀಗೆ ದಿನಕ್ಕೊಂದು ಹೆಸರಿನಲ್ಲಿ ವಿಭಿನ್ನ ಶೈಲಿಗಳಲ್ಲಿ ತಯಾರಿಸುವ ಜ್ಯೂಸ್‌ನ ರುಚಿ ಜನರನ್ನು ಸೆಳೆಯುತ್ತಿದೆ.
ಜ್ಯೂಸ್ ಅಂಗಡಿಗಳ ಎದುರು ಜನ ಬೇಸಿಗೆಯಲ್ಲಿ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯ. ಆದರೆ, ಇಲ್ಲಿ ಪ್ರತಿದಿನವೂ ಸಾಲು ನಿಲ್ಲುತ್ತಾರೆ. ಮಲ್ಲೇಶ್ವರದಿಂದ ಆರಂಭಗೊಂಡ ‘ಈಟ್ ರಾಜಾ’ನ ಪಯಣ ಜಯನಗರ, ವಿ.ವಿ. ಪುರ, ಮೈಸೂರು ರಸ್ತೆ, ವಿಜಯವಾಡ, ದುಬೈವರೆಗೂ ತಲುಪಿದೆ.
ಈ ಜ್ಯೂಸ್ ಅಂಗಡಿ ಪರಿಕಲ್ಪನೆಯ ರುವಾರಿಆನಂದ್ ರಾಜ್. ರೇಡಿಯೊ ಕ್ಷೇತ್ರದಲ್ಲಿ ‘ಬೀಟ್ ರಾಜಾ’ ಎಂದೇ ಗುರುತಿಸಿಕೊಂಡಿದ್ದ ಎಂಜಿನಿಯರ್‌ಪದವೀಧರ.ಖಾಸಗಿ ರೇಡಿಯೊ ವಾಹಿನಿಗಳಲ್ಲಿ ರೇಡಿಯೊ ಜಾಕಿ (ಆರ್.ಜೆ) ವೃತ್ತಿ ಆರಂಭಿಸಿದ್ದ ಅವರಿಗೆ ತಂದೆಯ ಅಕಾಲಿಕ ಮರಣ ಹೊಸ ತಿರುವು ನೀಡಿತ್ತು. ವೃತ್ತಿ ತೊರೆದು ತಂದೆ ನಡೆಸುತ್ತಿದ್ದ ಅಂಗಡಿಯಿಂದಲೇ ಹೊಸದುಮಾಡಬೇಕೆಂಬಆಶಯದೊಂದಿಗೆ ಅವರು ಜ್ಯೂಸ್ ಅಂಗಡಿಯನ್ನು ಪ್ಲಾಸ್ಟಿಕ್‌ಮುಕ್ತಗೊಳಿಸಿದರು.
‘ಒಮ್ಮೆ ಥಾಯ್ಲೆಂಡ್‌ಗೆ ಭೇಟಿ ನೀಡಿದಾಗ ಹೋಟೆಲ್‌ನಲ್ಲಿ ಒಣ ತೆಂಗಿನ ಚಿಪ್ಪಿನಿಂದ ಕಪ್ ತಯಾರಿಸಿ ಅದರಲ್ಲೇ ಜ್ಯೂಸ್ ನೀಡುತ್ತಿದ್ದರು. ಕಸದಿಂದ ರಸ ಮಾಡುವ ಪ್ರೇರಣೆ ಅಲ್ಲಿಂದಲೇ ಸಿಕ್ಕಿತು’ ಎನ್ನುತ್ತಾರೆ ರಾಜಾ.
‘ನಮ್ಮಲ್ಲಿ ಜ್ಯೂಸ್ ಸೇವಿಸಲು ಪ್ಲಾಸ್ಟಿಕ್ ಲೋಟ ಬಳಸುವುದಿಲ್ಲ. ಬದಲಿಗೆ ಹಣ್ಣಿನ ಸಿಪ್ಪೆಗಳಲ್ಲೇ ಕಪ್ ತಯಾರಿಸಿ, ಅದರಲ್ಲೇ ಗ್ರಾಹಕರಿಗೆ ಜ್ಯೂಸ್ ನೀಡುತ್ತೇನೆ. ಕಲ್ಲಂಗಡಿ, ಪೈನಾಪಲ್, ಸಪೋಟ, ಬಾಳೆಹಣ್ಣು, ಕರ್ಬೂಜ ಹಣ್ಣುಗಳನ್ನುಅರ್ಧಭಾಗ ಕತ್ತರಿಸಿ ಹಣ್ಣಿನ ಸಾರವನ್ನು ತೆಗೆದು, ಅದಕ್ಕೆ ಕಪ್ ರೂಪ ನೀಡಲಾಗುತ್ತದೆ. ಹಣ್ಣಿನ ಜ್ಯೂಸ್, ಹಣ್ಣಿನ ಕಪ್‌ನಲ್ಲೇ ಸವಿಯುವ, ಕೆಲವು ಹಣ್ಣುಗಳನ್ನು ಜ್ಯೂಸ್ ಸೇವನೆಯ ಬಳಿಕ ತಿನ್ನುವ ಆಧುನಿಕ ವಿಧಾನ ಅಳವಡಿಸಿಕೊಂಡೆ. ಈ ಪ್ರಕ್ರಿಯೆಯಲ್ಲಿ ಪ್ಲಾಸ್ಟಿಕ್ ಬಳಕೆಯೇ ಇರುವುದಿಲ್ಲ’ ಎಂದರು.
ಅಮ್ಮ ಮಾಡಿದ್ದು: ‘ಅಮ್ಮನ ಕೈರುಚಿ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ವಿವಿಧ ಬಡಾವಣೆಗಳಲ್ಲಿರುವ ಅಮ್ಮಂದಿರನ್ನು ಸಂಪರ್ಕಿಸಿ, ಅವರ ಮನೆಗಳಿಂದಲೇ ವಿವಿಧ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುತ್ತೇನೆ. ಇದಕ್ಕೆ ‘ಅಮ್ಮ ಮಾಡಿದ್ದು’ ಎಂಬ ಹೆಸರಿಟ್ಟಿದ್ದೇನೆ’ ಎಂದರು.
ಸೈಕಲ್ ತುಳಿದರೆ ಜ್ಯೂಸ್ ಸಿದ್ಧ
‘ವಿದ್ಯುತ್ ಬಳಕೆ ಮಾಡದೆ ಕೇವಲ ಸೈಕಲ್ ತುಳಿಯುವ ಮೂಲಕ ಜ್ಯೂಸ್ ಸಿದ್ಧಗೊಳ್ಳುತ್ತದೆ. ಆ ಮಾದರಿಯ ಸೈಕಲ್ ಅನ್ನು ಈಟ್ ರಾಜಾ ಮಳಿಗೆಯಲ್ಲಿ ಇಡಲಾಗಿದೆ. ಗ್ರಾಹಕರು ಸ್ವತಃ ಸೈಕಲ್ ತುಳಿದು ಜ್ಯೂಸ್ ಸಿದ್ಧಪಡಿಸಿಕೊಳ್ಳುತ್ತಾರೆ. ಇದರಿಂದ ವ್ಯಾಯಾಮವೂ ಆಗುತ್ತದೆ. ರುಚಿಯಾದ ಜ್ಯೂಸ್ ಕೂಡ ಸಿದ್ಧವಾಗುತ್ತದೆ’ ಎಂದು ರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.