ADVERTISEMENT

ಸಂಧಿಸಲಿವೆ ಎಲಿವೇಟೆಡ್‌ ಕಾರಿಡಾರ್‌–ಹೆಬ್ಬಾಳ ಮೇಲ್ಸೇತುವೆ ಲೂಪ್‌

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 19:15 IST
Last Updated 29 ಮಾರ್ಚ್ 2019, 19:15 IST
   

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಯಲ್ಲಿ ವಿಮಾನನಿಲ್ದಾಣ ಕಡೆಯಿಂದ ನಗರದ ಕಡೆಗೆ ನಿರ್ಮಿಸುವ ಹೆಚ್ಚುವರಿ ಲೂಪ್‌ ಹಾಗೂ ಎಲಿವೇಟೆಡ್‌ ಕಾರಿಡಾರ್‌ ಹೆಬ್ಬಾಳದ ಬ್ಯಾಪ್ಟಿಸ್ಟ್‌ ಆಸ್ಪತ್ರೆ ಬಳಿ ಪರಸ್ಪರ ಸಂಧಿಸಲಿವೆ.

‘ಮೊದಲ ಯೋಜನೆ ಪ್ರಕಾರ ಎಸ್ಟೀಮ್‌ ಮಾಲ್‌ ಬಳಿಯಿಂದಲೇ ಎಲಿವೇಟೆಡ್‌ ಕಾರಿಡಾರ್‌ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ಹೆಬ್ಬಾಳ ಮೇಲ್ಸೇತುವೆ ಬಳಿ ವಿಮಾನನಿಲ್ದಾಣ ಕಡೆಯಿಂದ ನಗರದತ್ತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ 7.5 ಮೀ ಅಗಲದ ಎರಡು ಪಥಗಳನ್ನೊಳಗೊಂಡ ಹೆಚ್ಚುವರಿ ಲೂಪ್‌ ನಿರ್ಮಾಣ ಪ್ರಗತಿಯಲ್ಲಿದೆ. ಹಾಗಾಗಿ ಎಲಿವೇಟೆಡ್‌ ಕಾರಿಡಾರ್‌ ಅನ್ನು ಎಸ್ಟೀಮ್‌ ಮಾಲ್‌ವರೆಗೆ ವಿಸ್ತರಿಸುವ ಅಗತ್ಯವಿಲ್ಲ. ಹೆಚ್ಚುವರಿ ಲೂಪ್‌ ಅಂತ್ಯವಾಗುವಲ್ಲಿಂದ ಎಲಿವೇಡೆಡ್‌ ಕಾರಿಡಾರ್‌ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಬಿಡಿಎ ವತಿಯಿಂದಲೇ ಕೈಗೆತ್ತಿಕೊಂಡ ಹೆಚ್ಚುವರಿ ಲೂಪ್‌ ಕಾಮಗಾರಿ ಅನುದಾನ ಕೊರತೆಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಳ್ಳುವ ಆತಂಕ ಎದುರಿಸಿತ್ತು. ‘ಅನುದಾನ ಒದಗಿಸದಿದ್ದರೆ ಕಾಮಗಾರಿ ಮುಂದುವರಿಸುವುದು ಕಷ್ಟ’ ಎಂದು ಪ್ರಾಧಿಕಾರವು ಸರ್ಕಾರಕ್ಕೆ ಪತ್ರ ಬರೆದಿತ್ತು. ಬಳಿಕ ಕಾಮಗಾರಿಯನ್ನು ಬಿಬಿಎಂಪಿ ವತಿಯಿಂದ ಅನುಷ್ಠಾನಗೊಳಿಸಲು ನಗರಾಭಿವೃದ್ಧಿ ಇಲಾಖೆ ಮುಂದಾಗಿತ್ತು. ಈ ಕಾಮಗಾರಿಗೆ ಸರ್ಕಾರ 2019–20ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಮಿಸಲಿಟ್ಟಿದೆ. ಹಾಗಾಗಿ ಈ ಕಾಮಗಾರಿಯನ್ನು ಬಿಡಿಎ ವತಿಯಿಂದಲೇ ಮುಂದುವರಿಸಲಾಗುತ್ತಿದೆ.

ADVERTISEMENT

ಈಗ ಇರುವ ಫ್ಲೈಓವರ್‌ ಮೇಲಿನಿಂದಲೇ ಹೊಸ ಲೂಪ್‌ ಹಾದುಹೋಗಲಿದೆ. ಈಗಿರುವ ಮೇಲ್ಸೇತುವೆ ಮತ್ತು ಹೊಸ ಲೂಪ್‌ ನಡುವೆ ಕನಿಷ್ಠ 7 ಮೀ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಹಾಗಾಗಿ ಹೆಚ್ಚುವರಿ ಲೂಪ್‌ ಸುಮಾರು 16 ಮೀಗಳಷ್ಟು ಎತ್ತರದಲ್ಲಿ ಸಾಗುತ್ತದೆ. ಎಸ್ಟೀಮ್‌ ಮಾಲ್‌ ಬಳಿಯಿಂದ ಆರಂಭವಾಗುವ ಈ ಲೂಪ್‌ ಬ್ಯಾಪ್ಟಿಸ್ಟ್‌ ಆಸ್ಪತ್ರೆ ಬಳಿ ಕೊನೆಗೊಳ್ಳುತ್ತದೆ.

‘ಸದ್ಯಕ್ಕೆ ಹೆಚ್ಚುವರಿ ಲೂಪ್‌ಗೆ ಹಾಗೂ ಎಲಿವೇಟೆಡ್‌ ಕಾರಿಡಾರ್‌ಗೆ ಪ್ರತ್ಯೇಕ ರ‍್ಯಾಂಪ್‌ಗಳನ್ನು ನಿರ್ಮಿಸುವ ಪ್ರಸ್ತಾಪವಿದೆ. ಎಸ್ಟೀಮ್‌ ಮಾಲ್‌ ಬಳಿ ವಾಹನಗಳು ಮೇಲ್ಸೇತುವೆಯನ್ನು ಹತ್ತಲು ಹಾಗೂ ಹಾಗೂ ಬ್ಯಾಪ್ಟಿಸ್ಟ್‌ ಆಸ್ಪತ್ರೆಗಳ ಬಳಿ ಕೆಳಕ್ಕೆ ಇಳಿಯಲು ರ‍್ಯಾಂಪ್‌ಗಳನ್ನು ನಿರ್ಮಿಸಲಾಗುತ್ತದೆ. ಬ್ಯಾಪ್ಟಿಸ್ಟ್‌ ಆಸ್ಪತ್ರೆ ಬಳಿಯಿಂದ ಎಲಿವೇಟೆಡ್‌ ಕಾರಿಡಾರ್‌ನ ರ‍್ಯಾಂಪ್‌ ಆರಂಭವಾಗಲಿದೆ. ಆದರೆ, ಈ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ’ ಎಂದು ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್‌ಡಿಸಿಎಲ್‌)ಎಲಿವೇಟೆಡ್‌ ಕಾರಿಡಾರ್‌ನ ಉತ್ತರ–ದಕ್ಷಿಣ ಕಾರಿಡಾರ್‌ಗೆ ( ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಸಿಲ್ಕ್‌ ಬೋರ್ಡ್‌ವರೆಗೆ) ಮಾ.5ರಂದು ಟೆಂಡರ್‌ ಆಹ್ವಾನಿಸಿದೆ. ಮೂರು ಪ್ಯಾಕೇಜ್‌ಗಳಲ್ಲಿ ಈ ಕಾಮಗಾರಿಯ ಟೆಂಡರ್‌ ವಹಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.