ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ಬಳಸುವ ಮೂಲಕ ಜಾರಿ ನಿರ್ದೇಶನಾಲಯ (ಇ.ಡಿ) ತಪ್ಪು ಮಾಡಿದೆ’ ಎಂದು ಕಾಂಗ್ರೆಸ್ ಮುಖಂಡ ಪ್ರೊ. ಬಿ.ಕೆ. ಚಂದ್ರಶೇಖರ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸುವಾಗ ಇ.ಡಿಯು ಐಪಿಸಿ ಸೆಕ್ಷನ್‌ಗಳನ್ನು ಬಳಸುವಂತಿಲ್ಲ ಎಂದು ಪವನಾ ದಿಬ್ಬೂರು ಮತ್ತು ಇ.ಡಿ ಮಧ್ಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆ ತೀರ್ಪು ಶಿವಕುಮಾರ್ ಪ್ರಕರಣಕ್ಕೂ ಅನ್ವಯವಾಗುತ್ತದೆ’ ಎಂದರು.
ಶಿವಕುಮಾರ್ ವಿರುದ್ಧದ ಪ್ರಕರಣದಲ್ಲೂ ಇ.ಡಿ ಅಧಿಕಾರಿಗಳು ಐಪಿಸಿ ಸೆಕ್ಷನ್ 120–ಬಿ (ಕ್ರಿಮಿನಲ್ ಒಳಸಂಚು) ಉಲ್ಲೇಖಿಸಿದ್ದಾರೆ. ಇದು ಕಾನೂನುಬಾಹಿರ. ಈ ಪ್ರಕರಣದಲ್ಲಿ ಶಿವಕುಮಾರ್ ಈಗ ಮುಕ್ತರಾಗಿದ್ದಾರೆ ಎಂದು ಹೇಳಿದರು.
ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ತೆಲಂಗಾಣದ ಮುಖಂಡ ಜಿ. ವಿವೇಕಾನಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕಾಂಗ್ರೆಸ್‌ಗೆ ಮರಳಿದ ಬಳಿಕ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ದೂರಿದರು.
‘ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ. ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಆ ರೀತಿ ನಡೆಯುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.