ADVERTISEMENT

ಮುಡಾ ಬದಲಿ ನಿವೇಶನ ಹಂಚಿಕೆ: ಕುಮಾರ್‌ ನಾಯ್ಕ್‌ಗೆ ಆರೂವರೆ ಗಂಟೆ ವಿಚಾರಣೆ

ತನಿಖೆ ಚುರುಕುಗೊಳಿಸಿದ ಇ.ಡಿ.

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:11 IST
Last Updated 13 ನವೆಂಬರ್ 2024, 16:11 IST
ಜಿ. ಕುಮಾರ್ ನಾಯ್ಕ್
ಜಿ. ಕುಮಾರ್ ನಾಯ್ಕ್   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಜಿ. ಕುಮಾರ್ ನಾಯ್ಕ್ ಅವರನ್ನು ಬುಧವಾರ ಆರೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದರು.

ನಿವೃತ್ತ ಐಎಎಸ್‌ ಅಧಿಕಾರಿಯಾಗಿರುವ ಕುಮಾರ್ ನಾಯ್ಕ್ 2002ರಿಂದ 2005ರವರೆಗೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಮೈಸೂರಿನ ಕೆಸರೆ ಗ್ರಾಮದಲ್ಲಿ ಮುಡಾ ಸ್ವಾಧೀನಪಡಿಸಿಕೊಂಡಿದ್ದ 3 ಎಕರೆ 16 ಗುಂಟೆ ಜಮೀನನ್ನು ಇದೇ ಅವಧಿಯಲ್ಲಿ ಭೂ ಪರಿವರ್ತನೆ ಮಾಡಲಾಗಿತ್ತು. ಭೂ ಪರಿವರ್ತನೆ ಪ್ರಕ್ರಿಯೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ಇ.ಡಿ. ವಿಚಾರಣೆ ನಡೆಸಿದೆ.

ಶಾಂತಿನಗರದಲ್ಲಿರುವ ಇ.ಡಿ. ಕಚೇರಿಗೆ ಬುಧವಾರ ಬೆಳಿಗ್ಗೆಯೇ ಬಂದ ಕುಮಾರ್‌ ನಾಯ್ಕ್‌, ತನಿಖಾ ತಂಡ ಅಧಿಕಾರಿಗಳ ಎದುರು ಹಾಜರಾದರು. ಸಂಜೆಯವರೆಗೂ ಸತತವಾಗಿ ವಿಚಾರಣೆ ಎದುರಿಸಿದರು. ಖಾಸಗಿ ದೂರನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿರುವ ಮಾಹಿತಿ ಮತ್ತು ಈ ಪ್ರಕರಣದ ಭಾಗವಾಗಿ ಇ.ಡಿ. ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿರುವ ದಾಖಲೆಗಳನ್ನು ಆಧರಿಸಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್‌ ನಾಯ್ಕ್‌, ‘ನಾನು ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಅವಧಿಯಲ್ಲಿ ಮೈಸೂರಿನ ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನಿನ ಭೂ ಪರಿವರ್ತನೆ ಆದೇಶ ಹೊರಡಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ’ ಎಂದರು.

‘ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ನನ್ನ ಮೇಲೆ ಯಾರೂ ಒತ್ತಡ ಹೇರಿರಲಿಲ್ಲ. ಕಾನೂನಿನ ಪ್ರಕಾರವೇ ಪ್ರಕ್ರಿಯೆ ನಡೆದಿತ್ತು. ಆ ವಿವರಗಳನ್ನು ತನಿಖಾ ತಂಡದ ಜತೆ ಹಂಚಿಕೊಂಡಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.