ಬೆಂಗಳೂರು: ನಗರದಾದ್ಯಂತ ಕೊಳವೆಬಾವಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಸಂಬಂಧ ವಿವರಣೆ ಕೇಳಿ ಜಾರಿ ನಿರ್ದೇಶನಾಲಯವು(ಇಡಿ) ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ನೀಡಿದೆ.
‘ಬಿಬಿಎಂಪಿ ಅಧಿಕಾರಿಗಳು ₹970 ಕೋಟಿ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಈ ಹಿಂದೆ ಎಸಿಬಿಯಲ್ಲಿ ದೂರು ದಾಖಲಿಸಿದ್ದರು. ಎಸಿಬಿ ವಿಸರ್ಜನೆಯಾದ ಬಳಿಕ ದೂರು ಇ.ಡಿಗೆ ವರ್ಗಾವಣೆಯಾಗಿತ್ತು. ಈಗ ಇ.ಡಿ ವಿವರಣೆ ಕೇಳಿದೆ.
‘ಆರೋಪಗಳ ಸಂಬಂಧ ವಿಚಾರಣೆ ನಡೆಯುತ್ತಿರುವುದರಿಂದ ಇ.ಡಿ ಕೆಲವು ವಿವರಗಳನ್ನು ಕೇಳಿದೆ. ಎಲ್ಲಾ ದಾಖಲೆಗಳ ಸಹಿತ ವಿವರಣೆ ಸಲ್ಲಿಸಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಅವರು ವಿವರಣೆ ಸಲ್ಲಿಸಲಿದ್ದಾರೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.