ADVERTISEMENT

ಇ.ಡಿ ದಾಳಿ: ₹ 11.25 ಕೋಟಿ ಠೇವಣಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
<div class="paragraphs"><p>ಇ.ಡಿ</p></div>

ಇ.ಡಿ

   

ಬೆಂಗಳೂರು: ರಿಯಲ್‌ ಎಸ್ಟೇಟ್ ಯೋಜನೆಗಳ ಹೆಸರಿನಲ್ಲಿ ಗ್ರಾಹಕರಿಂದ ₹250 ಕೋಟಿ ಠೇವಣಿ ಸಂಗ್ರಹಿಸಿ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್‌ ಆರ್‌. ತಾತಾ ಮತ್ತು ಅವರ ನಿಕಟವರ್ತಿಗಳಿಗೆ ಸಂಬಂಧಿಸಿದ ಎಂಟು ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ₹11.25 ಕೋಟಿ ಮೊತ್ತದ ಬ್ಯಾಂಕ್‌ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.

ಫೆಬ್ರುವರಿ 29 ಮತ್ತು ಮಾರ್ಚ್‌ 1ರಂದು ಬೆಂಗಳೂರಿನ ಎಂಟು ಸ್ಥಳಗಳ ಮೇಲೆ ದಾಳಿಮಾಡಿ, ಶೋಧ ನಡೆಸಲಾಗಿದೆ. ವಿಜಯ್‌ ತಾತಾ, ಆರ್‌.ಎಸ್‌. ಚಂದ್ರಶೇಖರ್‌, ಮುನಿರಾಜು ಕೆ., ಡಿ. ನಾಗೇಂದ್ರ ಬಾಬು ಮತ್ತು ಮಂಜುನಾಥ್‌ ಬಿ.ಎಸ್‌. ಎಂಬುವವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆದಿದೆ. ಸಂಚಯ ಲ್ಯಾಂಡ್‌ ಆ್ಯಂಡ್‌ ಎಸ್ಟೇಟ್ಸ್‌ ಪ್ರೈವೇಟ್‌ ಲಿಮಿಟೆಡ್‌, ಬಿಸಿಸಿ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್ ಲಿಮಿಟೆಡ್, ಆಕಾಶ್‌ ಎಜುಕೇಷನ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಟ್ರಸ್ಟ್‌ ಮತ್ತು ಎಸ್‌.ವಿ. ಕಾಂಕ್ರೀಟ್‌ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಚೇರಿಗಳಲ್ಲೂ ಶೋಧ ನಡೆಸಲಾಗಿದೆ ಎಂದು ಇ.ಡಿ ಹೇಳಿದೆ.

ADVERTISEMENT

₹ 11.25 ಕೋಟಿ ಬ್ಯಾಂಕ್‌ ಠೇವಣಿಗಳನ್ನು ಮುಟ್ಟು ಹಾಕಿಕೊಂಡಿದ್ದು, ₹120 ಕೋಟಿ ಮೌಲ್ಯದ ಸ್ಥಿರಾಸ್ತಿಗಳ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳುಳ್ಳ ಹಲವು ಡಿಜಿಟಲ್‌ ಸಾಧನಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತನಿಖಾ ಸಂಸ್ಥೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಸಂಚಯ ಲ್ಯಾಂಡ್‌ ಆ್ಯಂಡ್‌ ಎಸ್ಟೇಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ರಿಯಲ್‌ ಎಸ್ಟೇಟ್‌ ಯೋಜನೆಗಳ ಹೆಸರಿನಲ್ಲಿ ಗ್ರಾಹಕರಿಂದ ₹ 250 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಿತ್ತು. ಅಪಾರ್ಟ್‌ಮೆಂಟ್‌ ಖರೀದಿಗಾಗಿ ಜನರು ನೀಡಿದ್ದ ಹಣದಲ್ಲಿ ಬೃಹತ್‌ ಮೊತ್ತವನ್ನು ವಿಜಯ್‌ ತಾತಾ ಮತ್ತು ಸಹಚರರು ಅನ್ಯ ಖಾತೆಗಳಿಗೆ ವರ್ಗಾಯಿಸಿಕೊಂಡು, ದುರ್ಬಳಕೆ ಮಾಡಿಕೊಂಡಿರುವ ಆರೋಪವಿದೆ.

ಬೆಂಗಳೂರು ನಗರ ಪೊಲೀಸರು ಈ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಿದ್ದರು. ಅದರ ಆಧಾರದಲ್ಲಿ ಇ.ಡಿ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.