ADVERTISEMENT

ಎಡ್ಯುವರ್ಸ್ ಶೈಕ್ಷಣಿಕ ಮೇಳ: ಇರಲಿ ಕೌಶಲ, ಅವಕಾಶ ಹೇರಳ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 6:04 IST
Last Updated 24 ಏಪ್ರಿಲ್ 2023, 6:04 IST
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಎಡ್ಯುವರ್ಸ್ ಗೋಷ್ಠಿಯಲ್ಲಿ (ಎಡದಿಂದ) ವಿನಯ್ ಕುಮಾರ್, ಅಕ್ಷರ ದಾಮ್ಲೆ, ಸುಷ್ಮಾ, ಶಿಲ್ಪ ರುದ್ರಪ್ಪ ಪಾಲ್ಗೊಂಡಿದ್ದರು   – ಪ್ರಜಾವಾಣಿ ಚಿತ್ರಗಳು/ ಎಂ.ಎಸ್‌.ಮಂಜುನಾಥ್‌
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಎಡ್ಯುವರ್ಸ್ ಗೋಷ್ಠಿಯಲ್ಲಿ (ಎಡದಿಂದ) ವಿನಯ್ ಕುಮಾರ್, ಅಕ್ಷರ ದಾಮ್ಲೆ, ಸುಷ್ಮಾ, ಶಿಲ್ಪ ರುದ್ರಪ್ಪ ಪಾಲ್ಗೊಂಡಿದ್ದರು – ಪ್ರಜಾವಾಣಿ ಚಿತ್ರಗಳು/ ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ‘ಯಾವುದೋ ಒಂದು ವಿಷಯವನ್ನು ಕಂಠಪಾಠ ಮಾಡಿಕೊಂಡು ಐಎಎಸ್‌ ಪರೀಕ್ಷೆ ಪಾಸು ಮಾಡಲು ಸಾಧ್ಯವಿಲ್ಲ. ಎಲ್ಲ ಕ್ಷೇತ್ರದಲ್ಲೂ ಪರಿಪೂರ್ಣವಾಗಿದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ’ ಎಂದು ‘ಇನ್‌ಸೈಟ್‌’ ಅಕಾಡೆಮಿ ಸ್ಥಾಪಕ ವಿನಯ್‌ ಕುಮಾರ್‌ ಹೇಳಿದರು.

‘ಐಎಎಸ್‌ ಪರೀಕ್ಷೆಗೆ ಸಿದ್ಧತೆ’ ಕುರಿತು ಮಾತನಾಡಿದ ಅವರು, ‘ಚಿಕ್ಕಂದಿನಲ್ಲೇ ಸುದ್ದಿ ಪತ್ರಿಕೆ ಓದಬೇಕು. ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು’ ಎಂದರು.

‘ಬಿ.ಎ ಪದವಿಗೆ ಸೇರಿದರೆ ಐಎಎಸ್‌ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದೆಂಬ ತಪ್ಪು ಅಭಿಪ್ರಾಯ ಕೆಲವರಲ್ಲಿದೆ. ಇನ್ನು ಕೆಲವರು ದೂರ ಶಿಕ್ಷಣದಲ್ಲಿ ಪದವಿಗೆ ಸೇರಿ ಐಎಎಸ್‌ ತರಬೇತಿಗೆ ಬರುತ್ತಾರೆ. ಅದೂ ಸಹ ತಪ್ಪು. ಬದಲಿಗೆ ನಿತ್ಯ ಕಾಲೇಜಿಗೆ ತೆರಳಿಯೇ ಪದವಿ ಶಿಕ್ಷಣ ಪಡೆಯಬೇಕು. ಒಳ್ಳೆಯ ಕಾಲೇಜು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಕ್ಯಾಂಪಸ್‌ನಲ್ಲಿಯೇ ಮನಸ್ಸು ವಿಕಾಸಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಭವಿಷ್ಯದಲ್ಲಿ ಜ್ಞಾನವೊಂದೇ ಮುಖ್ಯ ಆಗುವುದಿಲ್ಲ. ಅನಿಶ್ಚಿತ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದೂ ಪ್ರಧಾನ ಪಾತ್ರ ವಹಿಸಲಿದೆ. ಉದ್ಯೋಗ ಆಕಾಂಕ್ಷಿಗಳು ಕೌಶಲದ ಹಿಂದೆ ಓಡಬೇಕಾಗಿದೆ’ ಎಂದರು.

‘ಎಂಜಿನಿಯರಿಂಗ್‌, ವೈದ್ಯಕೀಯ ಶಿಕ್ಷಣದ ಬಗ್ಗೆ ಜನರಿಗೆ ಹೆಚ್ಚಿನ ಅರಿವಿದೆ. ಅದೇ ಐಎಎಸ್‌ ಬಗ್ಗೆ ಜನರಿಗೆ ತಿಳಿವಳಿಕೆ ಕಡಿಮೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವೂ ಇರಲಿ’ ಎಂದರು.

‘ರಂಗಭೂಮಿ ಕಲೆಗಳು...’ ಕುರಿತು ರಂಗಭೂಮಿ ನಟಿ ಎಸ್‌.ವಿ.ಸುಷ್ಮಾ ಮಾತನಾಡಿ, ‘ರಂಗಭೂಮಿ ಪ್ರಕೃತಿಗೆ ಹತ್ತಿರ ಆಗಿರುವಂತೆ ಮಾಡಲಿದೆ. ಮನುಷ್ಯರನ್ನು ಮನಷ್ಯರಂತೆಯೇ ನೋಡುವಂತೆ ಮಾಡಲಿದೆ. ರಂಗಭೂಮಿಗೆ ಬಂದರೆ ಒತ್ತಡ ನಿಭಾಯಿಸುವುದನ್ನು ಸಹಜವಾಗಿಯೇ ಕಲಿಯಬಹುದು’ ಎಂದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ಎಲ್ಲ ವಿ.ವಿಗಳು ರಂಗಭೂಮಿ ವಿಭಾಗವನ್ನು ಆರಂಭಿಸಿವೆ. ಎಂಜಿನಿಯರಿಂಗ್‌ ಜತೆಗೆ ರಂಗಭೂಮಿ ಶಿಕ್ಷಣವನ್ನು ಕಲಿಯಬಹುದಾಗಿದೆ. ನಾವು ಬರೀ ಸಾಂಪ್ರದಾಯಿಕ ಕೆಲಸಗಳ ಬಗ್ಗೆಯೇ ಯೋಚಿಸುತ್ತೇವೆ. ಅದರಾಚೆಗೂ ಸಾಕಷ್ಟು ವೃತ್ತಿಗಳಿವೆ. ಇವೆಂಟ್‌ ಮ್ಯಾನೇಜ್‌ಮೆಂಟ್‌, ಕಂಟೆಂಟ್‌ ರೈಟಿಂಗ್, ಫೋಟೊಗ್ರಫಿ... ಹೀಗೆ ನಾನಾ ಕೆಲಸಗಳಿವೆ. ಅಲ್ಲಿಯೂ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು’ ಎಂದು ಸುಷ್ಮಾ ಹೇಳಿದರು.

ಮನೋರೋಗ ತಜ್ಞ ಅಕ್ಷರ ದಾಮ್ಲೆ ಮಾತನಾಡಿ, ‘ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಇನ್ನೂ ಹೆಚ್ಚಿನ ಒತ್ತು ನೀಡುತ್ತಿಲ್ಲ. ಮಾನಸಿಕ ಆರೋಗ್ಯವನ್ನು ನಿವಾರಣೆ ಮಾಡುವ ಅಗತ್ಯ ಇಂದು ಹೆಚ್ಚಿದೆ’ ಎಂದರು.

‘ಮನೋರೋಗ ತಜ್ಞರ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಮಾನಸಿಕ ಆರೋಗ್ಯದ ಬಗ್ಗೆ ಆಸಕ್ತಿಯುಳ್ಳವರು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದು ಹೇಳಿದರು. ಶಿಲ್ಪಾ ಸಂವಾದ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.