ADVERTISEMENT

ಸಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೊಂದೇ ಮಾರ್ಗ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 16:30 IST
Last Updated 10 ಮಾರ್ಚ್ 2024, 16:30 IST
ಕೊಡಿಗೇಹಳ್ಳಿಯ ಬೆಂಗಳೂರು ಪಬ್ಲಿಕ್‌ ಶಾಲೆಯಲ್ಲಿ 26 ನೂತನ ಕೊಠಡಿಗಳಿಗೆ ಸಚಿವರಾದ ಎಸ್‌.ಮಧು ಬಂಗಾರಪ್ಪ ಹಾಗೂ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಸಂಸದ ಡಿ.ವಿ.ಸದಾನಂದಗೌಡ, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌, ಕಾಂಗ್ರೆಸ್‌ ಮುಖಂಡರಾದ ಎನ್‌.ಎನ್‌.ಶ್ರೀನಿವಾಸಯ್ಯ, ಹನುಮಂತೇಗೌಡ ಭಾಗವಹಿಸಿದ್ದರು.
ಕೊಡಿಗೇಹಳ್ಳಿಯ ಬೆಂಗಳೂರು ಪಬ್ಲಿಕ್‌ ಶಾಲೆಯಲ್ಲಿ 26 ನೂತನ ಕೊಠಡಿಗಳಿಗೆ ಸಚಿವರಾದ ಎಸ್‌.ಮಧು ಬಂಗಾರಪ್ಪ ಹಾಗೂ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಸಂಸದ ಡಿ.ವಿ.ಸದಾನಂದಗೌಡ, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌, ಕಾಂಗ್ರೆಸ್‌ ಮುಖಂಡರಾದ ಎನ್‌.ಎನ್‌.ಶ್ರೀನಿವಾಸಯ್ಯ, ಹನುಮಂತೇಗೌಡ ಭಾಗವಹಿಸಿದ್ದರು.   

ಯಲಹಂಕ: ಸಮಾಜದಲ್ಲಿ ಎಲ್ಲ ವರ್ಗದ ಜನರು ಸಮಾನವಾಗಿ ಬದುಕಲು ಹಾಗೂ ಸಮಸಮಾಜ ನಿರ್ಮಿಸಲು ಶಿಕ್ಷಣವೊಂದೇ ಏಕೈಕ ಮಾರ್ಗ. ಹೀಗಾಗಿ ನೂತನ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಗೆ ಸರ್ಕಾರ ₹70 ಕೋಟಿ ಅನುದಾನ ಮೀಸಲಿರಿಸಿದೆ ಎಂದು ಶಿಕ್ಷಣ ಸಚಿವ ಎಸ್‌.ಮಧು ಬಂಗಾರಪ್ಪ ಹೇಳಿದರು.

ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಕೊಡಿಗೇಹಳ್ಳಿಯ ಬೆಂಗಳೂರು ಪಬ್ಲಿಕ್‌ ಶಾಲೆಯಲ್ಲಿ 26 ನೂತನ ಕೊಠಡಿಗಳು ಮತ್ತು ನಗರದ 16 ಶಾಲೆಗಳಲ್ಲಿ 16 ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಂತೆಯೇ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕೆಂಬ ನಿಲುವಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ADVERTISEMENT

ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯ್ದ 16 ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು, ಭವಿಷ್ಯದಲ್ಲಿ ದಾಖಲಾತಿ ಹೆಚ್ಚಾಗುವ ಸಂಭವವಿರುವ ಹಾಗೂ ಸ್ಥಳೀಯವಾಗಿ ಅನೇಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅವಕಾಶವಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗುಣಮಟ್ಟದ ಶೈಕ್ಷಣಿಕ ಉಪಕ್ರಮಗಳನ್ನು ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಸಹಯೋಗದೊಂದಿಗೆ ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಈ ಶಾಲೆಗಳ ಶಿಕ್ಷಕರಿಗೆ ಬೋಧನಾ ಗುಣಮಟ್ಟ ಹೆಚ್ಚಿಸಲು ತಂತ್ರಜ್ಞಾನ ಆಧಾರಿತ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ‘15 ವರ್ಷಗಳಲ್ಲಿ ಈ ಶಾಲೆಯಲ್ಲಿ 43 ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. 2008ರಲ್ಲಿ 650ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಇಂದು 1150ಕ್ಕೆ ಏರಿಕೆಯಾಗಿದೆ. ಶಾಲೆಯ ಅಭಿವೃದ್ಧಿಗಾಗಿ ಬಿಬಿಎಂಪಿ, ಶಿಕ್ಷಣ ಇಲಾಖೆ ಸೇರಿ ಹಲವು ಮೂಲಗಳಿಂದ ಹಣ ಹೊಂದಿಸಲಾಗಿದೆ. ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಶಾಲಾ ಆವರಣ ಅನುಕೂಲಕರವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.