ಬೆಂಗಳೂರು: ‘ವಿದ್ಯಾರ್ಥಿಗಳು ಕೇವಲ ಶಿಕ್ಷಣ, ಪಡೆದರೆ ಸಾಲದು, ಜೀವನದಲ್ಲಿ ಉನ್ನತಮಟ್ಟದ ಸಾಧನೆಗೆ ಪ್ರಯತ್ನಿಸಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಂ.ಜಯಕರ ಶೆಟ್ಟಿ ಸಲಹೆ ನೀಡಿದರು.
ಜಯನಗರ ನ್ಯಾಷನಲ್ ಕಾಲೇಜಿನ 13ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ‘ದೇಶ ಹಾಗೂ ರಾಜ್ಯದಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಇದೆ. ಇದು ವಿದ್ಯಾರ್ಥಿಗಳನ್ನು ಜಾಗತಿಕ ಸವಾಲುಗಳಿಗೆ ಸಜ್ಜುಗೊಳಿಸಲು ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.
‘ಶಿಕ್ಷಣವೆಂದರೆ ಪ್ರಮಾಣಪತ್ರ, ಚಿನ್ನದ ಪದಕಗಳಷ್ಟೇ ಅಲ್ಲ. ನೈತಿಕ ಶಿಕ್ಷಣ ನಿಮ್ಮ ಬದುಕಿಗೆ ಬುನಾದಿಯಾಗಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಫ್ಲಾರಿಡಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸುಂದರಾಜ ಸೀತಾರಾಮ ಅಯ್ಯಂಗಾರ್ ರ‍್ಯಾಂಕ್ ವಿಜೇತರಿಗೆ ಪದಕಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ‘ನ್ಯಾಷನಲ್ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿನ ದೂರದೃಷ್ಟಿಯ ಜೊತೆಗೆ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತಿದೆ’ ಎಂದು ಶ್ಲಾಘಿಸಿದರು.
‘ಅಪರಾಧ ವಿಜ್ಞಾನ ವ್ಯಾಪಕವಾಗಿ ಬೆಳೆಯುತ್ತಿದೆ. ಈ ವಿಭಾಗದಲ್ಲಿ ಅಧ್ಯಯನ ಮಾಡಿದವರಿಗೆ ವಿಪುಲ ಉದ್ಯೋಗ ಅವಕಾಶಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ 16 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 485 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಂ.ಕಾಂ, ಗಣಿತ, ಭೌತವಿಜ್ಞಾನ ವಿಭಾಗದ 52 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 433 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.
ಎನ್‌ಇಎಸ್ ಆಫ್ ಕರ್ನಾಟಕ ಅಧ್ಯಕ್ಷ ಎಚ್.ಎನ್.ಸುಬ್ರಹ್ಮಣ್ಯ, ಗೌರವ ಕಾರ್ಯದರ್ಶಿ ವಿ.ವೆಂಕಟಶಿವಾ ರೆಡ್ಡಿ, ಕಾರ್ಯದರ್ಶಿ ಬಿ.ಎಸ್.ಅರುಣ್ ಕುಮಾರ್, ಜಂಟಿ ಕಾರ್ಯದರ್ಶಿ ಸುಧಾಕರ ಇಸ್ತೂರಿ, ಕೋಶಾಧಿಕಾರಿ ತಲ್ಲಂ ಆರ್. ದ್ವಾರಕನಾಥ್, ಅಧ್ಯಕ್ಷ ಪಿ.ಎಲ್.ವೆಂಕಟರಾಮ ರೆಡ್ಡಿ, ಸಹ ಉಪಾಧ್ಯಕ್ಷ ವಿ. ಮಂಜುನಾಥ್, ಪ್ರಾಚಾರ್ಯ ಪಿ.ಎಲ್.ರಮೇಶ್, ಕಾಲೇಜು ಮಂಡಳಿಯ ಕಾರ್ಯದರ್ಶಿ ಪ್ರೊ. ಚೆಲುವಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.