ADVERTISEMENT

ಬೆಂಗಳೂರು | ಈಜಿಪುರ ಮೇಲ್ಸೇತುವೆ: ಸೆಗ್‌ಮೆಂಟ್‌ನಲ್ಲಿ ಬಿರುಕು, ಕಾಮಗಾರಿಗೆ ವಿಘ್ನ

ಹಿಂದಿನ ಗುತ್ತಿಗೆದಾರರ ‘ಪ್ರೀಕಾಸ್ಟ್‌’ನಲ್ಲಿ ಗುಣಮಟ್ಟ ಕೊರತೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 1:05 IST
Last Updated 8 ನವೆಂಬರ್ 2024, 1:05 IST
ಈಜಿಪುರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ
ಈಜಿಪುರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ   

ಬೆಂಗಳೂರು: ಈಜಿಪುರ ಮೇಲ್ಸೇತುವೆ ಕಾಮಗಾರಿ ನಡೆಯುವ ಹಂತದಲ್ಲೇ ಸೆಗ್‌ಮೆಂಟ್‌ನಲ್ಲಿ ಬಿರುಕು ಕಂಡುಬಂದಿದೆ. ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ‘ಪ್ರೀಕಾಸ್ಟ್‌ ಸೆಗ್‌ಮೆಂಟ್‌’ನಿಂದ ಸಿಮೆಂಟ್‌, ಜಲ್ಲಿ ಹೊರಬರುತ್ತಿವೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮಧ್ಯ ಪ್ರವೇಶದಿಂದ ಎರಡು ತಿಂಗಳಿಂದ ವೇಗ ಪಡೆದುಕೊಂಡಿದ್ದ ಕಾಮಗಾರಿಗೆ ಮತ್ತೆ ವಿಘ್ನ ಎದುರಾಗಿದೆ. ಹಿಂದಿನ ಗುತ್ತಿಗೆದಾರರು ನಿರ್ಮಿಸಿದ್ದ ‘ಪ್ರೀಕಾಸ್ಟ್‌ ಸೆಗ್‌ಮೆಂಟ್‌’ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಪಿಲ್ಲರ್‌ಗಳ ಮೇಲೆ ಸೆಗ್‌ಮೆಂಟ್‌ಗಳನ್ನು ಇರಿಸಿ, ಕೇಬಲ್‌ ಮೂಲಕ ಅದನ್ನು ಜೋಡಿಸುವ ಪ್ರಕ್ರಿಯೆ ನಡೆಯುವ ಹಂತದಲ್ಲಿ ಸೆಗ್‌ಮೆಂಟ್‌ನಿಂದ ಜಲ್ಲಿ ಹಾಗೂ ಸಿಮೆಂಟ್‌ ಉದುರಿ, ಬಿರುಕು ದೊಡ್ಡದಾಗುತ್ತಿದೆ.

‌ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ (ಈಜಿಪುರ) ಎಲಿವೇಟೆಡ್‌ ಕಾರಿಡಾರ್‌ 2.5 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು 2017ರಿಂದ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆ ಆರಂಭಿಸಿತ್ತು. 2019ರೊಳಗೆ ಯೋಜನೆ ಪೂರ್ಣಗೊಳ್ಳಬೇಕಾಗಿತ್ತು. ಕಾಮಗಾರಿ ವಿಳಂಬದ ಕಾರಣದಿಂದ ಹೈಕೋರ್ಟ್‌ ಸೂಚನೆಯಂತೆ ಗುತ್ತಿಗೆಯನ್ನು 2022ರಲ್ಲಿ ರದ್ದುಗೊಳಿಸಲಾಯಿತು. ನಂತರ, ಉಳಿದ ಕಾಮಗಾರಿಯನ್ನು ಪೂರೈಸಲು ಬಿಎಸ್‌ಸಿಪಿಎಲ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಗೆ ‘ಟರ್ನ್‌ ಕೀ ಲಂಪ್‌ಸಮ್‌’ ಗುತ್ತಿಗೆ ನೀಡಿ, 2023ರ ನವೆಂಬರ್‌ 17ರಂದು ಕಾರ್ಯಾದೇಶ ನೀಡಲಾಯಿತು.

ADVERTISEMENT

ಹಿಂದಿನ ಗುತ್ತಿಗೆದಾರರು ನಿರ್ಮಿಸಿದ್ದ 69 ಪ್ರೀಕಾಸ್ಟ್‌ ಸೆಗ್‌ಮೆಂಟ್‌ಗಳ ಪೈಕಿ 11 ಸೆಗ್‌ಮೆಂಟ್‌ಗಳನ್ನು ಈಗಿನ ಗುತ್ತಿಗೆದಾರರು ಅಳವಡಿಸಿದ್ದಾರೆ. ಇವುಗಳನ್ನು ಜೋಡಿಸುವ ಸಂದರ್ಭದಲ್ಲಿ ಒಂದು ಸೆಗ್‌ಮೆಂಟ್‌ನಿಂದ ಸಿಮೆಂಟ್‌, ಜಲ್ಲಿ ಉದುರಿ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ, ಕಾಮಗಾರಿಯನ್ನು ಒಂದು ವಾರದಿಂದ ನಿಲ್ಲಿಸಲಾಗಿದೆ. ಇದರಿಂದ ಕಾಮಗಾರಿ ವೇಗ ಕುಂಠಿತಗೊಂಡಿದ್ದು, ಹಿಂದಿನ ಕಾರ್ಯಯೋಜನೆಗಿಂತ ವಿಳಂಬವಾಗುವ ಸಾಧ್ಯತೆ ಇದೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಜೆ.ಎಂ. ಚಂದ್ರ ಕಿಶನ್‌ ನೇತೃತ್ವದ ತಜ್ಞರ ತಂಡ  ಸ್ಥಳಕ್ಕೆ ಭೇಟಿ ನೀಟಿ ಸೆಗ್‌ಮೆಂಟ್‌ ಅನ್ನು ಪರಿಶೀಲಿಸಿ, ವರದಿ ನೀಡಿದೆ. ಈಗ ಅಳವಡಿಸಿ, ಬಿರುಕು ಬಿಟ್ಟಿರುವ ಸೆಗ್‌ಮೆಂಟ್‌ ಅನ್ನು ತೆಗೆದು ಬೇರೊಂದನ್ನು ಅಳವಡಿಸಲು ಈ ತಂಡ ಸೂಚಿಸಿದೆ. ಅಲ್ಲದೇ, ಅಳವಡಿಕೆಗೆ ಬಾಕಿ ಇರುವ ಸೆಗ್‌ಮೆಂಟ್‌ಗಳ ಸಾಮರ್ಥ್ಯ ಪರಿಶೀಲನೆ ನಡೆಸಿದ ಬಳಿಕವೇ ಅವುಗಳನ್ನು ಬಳಸುವಂತೆಯೂ ಶಿಫಾರಸು ಮಾಡಿದೆ.

‘ನಾಲ್ಕು ವರ್ಷಗಳಿಂದ ಕಾಮಗಾರಿ ನಡೆಯದೆ ಸಮಸ್ಯೆ ಅನುಭವಿಸಿದ್ದೇವೆ. ಎರಡು ತಿಂಗಳಿಂದ ಕಾಮಗಾರಿ ವೇಗವಾಗಿ ನಡೆಯುತ್ತಿತ್ತು. ಇದೀಗ ಏನೋ ಸಮಸ್ಯೆ ಎಂದು ನಿಲ್ಲಿಸಿದ್ದಾರೆ. ನಾವು ಮಾತ್ರ ನಿತ್ಯವೂ ಸಂಚಾರ ದಟ್ಟಣೆಯಿಂದ ನರಳುತ್ತಿದ್ದೇವೆ’ ಎಂದು ಸ್ಥಳೀಯರಾದ ರಾಜಮೋಹನ್‌ ಅಳಲು ತೋಡಿಕೊಂಡರು.

ಈಜಿಪುರ ಮೇಲ್ಸೇತುವೆ ಸೆಗ್‌ಮೆಂಟ್‌ನಲ್ಲಿ ಬಿರುಕು ಬಿಟ್ಟಿರುವುದು
‘ಸೆಗ್‌ಮೆಂಟ್‌ ಬದಲಿಸಲು ಸೂಚನೆ’
‘ಹಿಂದಿನ ಗುತ್ತಿಗೆದಾರರು ನಿರ್ಮಿಸಿದ್ದ ಪ್ರೀಕಾಸ್ಟ್ ಸೆಗ್‌ಮೆಂಟ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಒಂದು ಸೆಗ್‌ಮೆಂಟ್‌ನಲ್ಲಿ ಮಾತ್ರ ಸಮಸ್ಯೆಯಾಗಿದ್ದು ಅದನ್ನು ಬದಲಿಸಲು ಸೂಚಿಸಲಾಗಿದೆ. ಎಲ್ಲ ರೀತಿಯ ಪೂರ್ವ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಆದರೆ ಈ ದೋಷ ಕಂಡುಬಂದಿರಲಿಲ್ಲ. ಇನ್ನೂ ಹೆಚ್ಚು ಜಾಗ್ರತೆ ವಹಿಸಿ ಕಾಮಗಾರಿ ಮುಂದುವರಿಸಲಾಗುತ್ತದೆ’ ಎಂದು ಬಿಬಿಎಂಪಿಯ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.