ADVERTISEMENT

ಬೆಂಗಳೂರು: ಸಂಭ್ರಮದಿಂದ ನಡೆದ ಈದ್‌ ಮಿಲಾದ್‌

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 15:57 IST
Last Updated 28 ಸೆಪ್ಟೆಂಬರ್ 2023, 15:57 IST
<div class="paragraphs"><p>ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ಗುರುವಾರ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಮೆರವಣಿಗೆ ಮೂಲಕ ಆಚರಿಸಿದರು. </p></div>

ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ಗುರುವಾರ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಮೆರವಣಿಗೆ ಮೂಲಕ ಆಚರಿಸಿದರು.

   

ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಬೆಂಗಳೂರು: ಪ್ರವಾದಿ ಮೊಹಮ್ಮದ್‌ ಅವರ ಜನ್ಮದಿನವನ್ನು ನೆನಪಿಸುವ ಈದ್ ಮಿಲಾದ್‌ ‌ಹಬ್ಬವನ್ನು ಮುಸ್ಲಿಂ ಸಮುದಾಯವರು ಗುರುವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಿದರು.

ADVERTISEMENT

ಮುಸ್ಲಿಮರ ಮನೆಯಲ್ಲಿ ಬೆಳಿಗ್ಗೆಯಿಂದಲೇ ಸಂಭ್ರಮವಿತ್ತು. ಸಂಬಂಧಿಕರು ಹಾಗೂ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಹಬ್ಬದ ಶುಭಾಶಯ ಕೋರಿದರು. ಹಲವರು ದವಸ–ಧಾನ್ಯ ಹಾಗೂ ನಗದು ದಾನ ಮಾಡಿದರು. ಶಿವಾಜಿನಗರ, ರಸೆಲ್ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಖರೀದಿಯೂ ಜೋರಾಗಿತ್ತು. 

ಈದ್‌ ಮಿಲಾದ್‌ ಮೆರವಣಿಗೆ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ಕೆಲವರು ಪ್ಲಾಸ್ಟಿಕ್ ಹೊದ್ದು ಮೆರವಣಿಗೆ ವೀಕ್ಷಿಸಿದರು. ಪ್ರಜಾವಾಣಿ ಚಿತ್ರ

ನಗರದ ಮಸೀದಿ, ದರ್ಗಾ ಹಾಗೂ ಮದರಸಾಗಳಿಗೆ ವಿಶೇಷ ವಿದ್ಯುತ್ ಹಾಗೂ ಬಣ್ಣದ ಕಾಗದಗಳ ಅಲಂಕಾರ ಮಾಡಲಾಗಿತ್ತು. ವಿದ್ಯುತ್‌ ಬೆಳಕಿನಲ್ಲಿ ಮಸೀದಿಗಳು ಕಂಗೊಳಿಸುತ್ತಿದವು.

ಟ್ಯಾನರಿ ರಸ್ತೆಯಿಂದ ಶಿವಾಜಿನಗರಕ್ಕೆ ಮಿಲಾದ್ (ಜನ್ಮದಿನ) ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಕೈಯಲ್ಲಿ ಬಲೂನ್‌ಗಳನ್ನು ಹಿಡಿದು ರಸ್ತೆಯುದ್ದಕ್ಕೂ ನೆರೆದಿದ್ದವರಿಗೆ ಶುಭಾಶಯ ಕೋರಿದರು. ಮೊಹಮ್ಮದ್ ಪೈಗಂಬರ್ ಅವರ ಸಂದೇಶಗಳ ಫಲಕಗಳನ್ನು ಹೊಂದಿದ್ದ ವಾಹನಗಳು ಗಮನಸೆಳೆದವು. ಮಕ್ಕಳು ಟಿಪ್ಪು ಸುಲ್ತಾನ್‌ ವೇಷ ಧರಿಸಿ ಮಿಂಚಿದರು.

ಮಳೆ ಬಂದ ಕಾರಣ ಮಹಿಳೆಯರು ಮಕ್ಕಳು ಛತ್ರಿ ಆಶ್ರಯದೊಂದಿಗೆ ಈದ್‌ ಮಿಲಾದ್‌ ಮೆರವಣಿಗೆಯನ್ನು ವೀಕ್ಷಿಸಿದರು. ಪ್ರಜಾವಾಣಿ ಚಿತ್ರ

ಕೆ.ಆರ್‌. ಮಾರುಕಟ್ಟೆ ಸಹಿತ ನಗರದ ವಿವಿಧ ಪ್ರದೇಶಗಳಲ್ಲಿ ಈದ್‌ ಮೆರವಣಿಗೆಗಳು ನಡೆದವು. ಕವ್ವಾಲಿಗಳನ್ನು ಹಾಡಲಾಯಿತು. ಸಾಮೂಹಿಕ ಪ್ರಾರ್ಥನೆಗಳು ನಡೆದವು.

ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಮರು ತಮ್ಮ ಮನೆಗಳಲ್ಲಿ ಪಾಯಸ, ಕಡುಬು ಹಾಗೂ ಇತರೆ ಸಿಹಿ ಪದಾರ್ಥ, ಬಿರಿಯಾನಿ ತಯಾರಿಸಿ ನೆರೆಹೊರೆಯವರಿಗೆ ಹಂಚಿದರು. ಪ್ರಮುಖ ಮಸೀದಿ ಹಾಗೂ ದರ್ಗಾಗಳಲ್ಲಿ ದಾನಿಗಳಿಂದ ಊಟ ವಿತರಣೆ ನಡೆಯಿತು.

ಈದ್ ಮಿಲಾದ್ ಮೆರವಣಿಗೆಯಲ್ಲಿ ಯುವಕರು ಕುಣಿದು ಸಂಭ್ರಮಿಸಿದರು. ಪ್ರಜಾವಾಣಿ ಚಿತ್ರ
ನಗರದ ಟ್ಯಾನರಿ ರಸ್ತೆಯಲ್ಲಿ ಗುರುವಾರ ನಡೆದ ಈದ್‌ಮಿಲಾದ್‌ ಸಂಭ್ರಮದಲ್ಲಿ ಕಂಡು ಬಂದ ಟಿಪ್ಪು ಸುಲ್ತಾನ್‌ ವೇಷಧಾರಿ ಮಗು. ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.