ADVERTISEMENT

ಈಜಿಪುರ ಮೇಲ್ಸೇತುವೆ: 3 ಸೆಗ್‌ಮೆಂಟ್‌ನಲ್ಲಿ ಬಿರುಕು

ಅಳವಡಿಸಿದ್ದ ಎರಡು ಹಾಗೂ ನಿರ್ಮಾಣ ಘಟಕದಲ್ಲಿದ್ದ ಒಂದು ಸೆಗ್‌ಮೆಂಟ್‌ನಲ್ಲಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 0:32 IST
Last Updated 22 ನವೆಂಬರ್ 2024, 0:32 IST
ಈಜಿಪುರ ಮೇಲ್ಸೇತುವೆಗೆ ಅಳವಡಿಸಲಾಗಿದ್ದ ಬಿರುಕುಗೊಂಡಿದ್ದ ಸೆಗ್‌ಮೆಂಟ್‌ ಕೆಳಗಿಳಿಸಲಾಯಿತು
ಈಜಿಪುರ ಮೇಲ್ಸೇತುವೆಗೆ ಅಳವಡಿಸಲಾಗಿದ್ದ ಬಿರುಕುಗೊಂಡಿದ್ದ ಸೆಗ್‌ಮೆಂಟ್‌ ಕೆಳಗಿಳಿಸಲಾಯಿತು   

ಬೆಂಗಳೂರು: ಈಜಿಪುರ ಮೇಲ್ಸೇತುವೆ ಕಾಮಗಾರಿಯಲ್ಲಿ ಬಿರುಕುಗೊಂಡಿರುವ ಸೆಗ್‌ಮೆಂಟ್‌ಗಳ ಸಂಖ್ಯೆ ಮೂರಕ್ಕೆ ತಲುಪಿದೆ. ನಾಲ್ಕು ವರ್ಷಗಳ ಹಿಂದೆ ಗುತ್ತಿಗೆದಾರರು ನಿರ್ಮಾಣ ಮಾಡಿದ್ದ ಸೆಗ್‌ಮೆಂಟ್‌ಗಳ ಸಮಸ್ಯೆಯಿಂದ ಮೇಲ್ಸೇತುವೆ ಕಾಮಗಾರಿ ಮತ್ತೆ ವಿಳಂಬವಾಗುತ್ತಿದೆ.

ಈಜಿಪುರ ಮೇಲ್ಸೇತುವೆ ಕಾಮಗಾರಿ ನಡೆಯುವ ಹಂತದಲ್ಲೇ ಸೆಗ್‌ಮೆಂಟ್‌ನಲ್ಲಿ ಬಿರುಕು ಕಂಡುಬಂದಿತ್ತು. ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ‘ಪ್ರೀಕಾಸ್ಟ್‌ ಸೆಗ್‌ಮೆಂಟ್‌’ನಿಂದ ಸಿಮೆಂಟ್‌, ಜಲ್ಲಿ ಹೊರಬರುತ್ತಿತ್ತು. ಒಂದಲ್ಲ ಎರಡು ಸೆಗ್‌ಮೆಂಟ್‌ನಲ್ಲಿ ಈ ಸಮಸ್ಯೆ ಕಂಡುಬಂದಿದ್ದರಿಂದ ಅವುಗಳನ್ನು ಕೆಳಗಿಳಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ‘ಕಾಸ್ಟಿಂಗ್‌ ಘಟಕ’ದಲ್ಲಿದ್ದ ಇನ್ನೊಂದು ಸೆಗ್‌ಮೆಂಟ್‌ನಲ್ಲೂ ಬಿರುಕು ಕಂಡುಬಂದಿದೆ.

‌ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ (ಈಜಿಪುರ) 2.5 ಕಿ.ಮೀ. ಉದ್ದದ ಎಲಿವೇಟೆಡ್‌ ಕಾರಿಡಾರ್‌ (ಮೇಲ್ಸೇತುವೆ) ನಿರ್ಮಿಸಲು 2017ರಲ್ಲಿ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಅವರು 69 ಪ್ರೀಕಾಸ್ಟ್‌ ಸೆಗ್‌ಮೆಂಟ್‌ಗಳನ್ನು ನಿರ್ಮಿಸಿದ್ದಾರೆ. ಅವುಗಳನ್ನು ಅಳವಡಿಸುವ ಕಾಮಗಾರಿಯನ್ನು ಬಿಎಸ್‌ಸಿಪಿಎಲ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆ ನಡೆಸುತ್ತಿದ್ದಾಗ ಸಮಸ್ಯೆ ಕಂಡುಬಂದಿದೆ.

ADVERTISEMENT

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವರದಿ ಆಧರಿಸಿ ಸೆಗ್‌ಮೆಂಟ್‌ಗಳನ್ನು ಬದಲಿಸಲಾಗುತ್ತಿದೆ. ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಕೂಡ ಸೆಗ್‌ಮೆಂಟ್‌ ಬದಲಿಸಲು ಸೂಚಿಸಿದ್ದರು. ಅಳವಡಿಸಿದ್ದ ಸೆಗ್‌ಮೆಂಟ್‌ಗಳಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅವುಗಳನ್ನು ಕೆಳಗಿಳಿಸಿ, ಬದಲಿಸಲು ಹೆಚ್ಚಿನ ಸಮಯ ವ್ಯಯವಾಗಿದೆ. ಇದರಿಂದ ಕಾಮಗಾರಿ ವಿಳಂಬವಾಗಿದೆ.

‘ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಒಟ್ಟು 564  ಪ್ರೀಕಾಸ್ಟ್‌ ಸೆಗ್‌ಮೆಂಟ್‌ಗಳನ್ನು ಅಳವಡಿಸಬೇಕು. ಇದರಲ್ಲಿ 69 ಸೆಗ್‌ಮೆಂಟ್‌ ಅನ್ನು ಹಿಂದಿನ ಗುತ್ತಿಗೆದಾರರು ನಿರ್ಮಿಸಿದ್ದಾರೆ. ಕೆಲವು ಸೆಗ್‌ಮೆಂಟ್‌ಗಳಲ್ಲಿ ದೋಷ ಕಂಡುಬಂದಿರುವುದರಿಂದ, ಎಲ್ಲ ಸೆಗ್‌ಮೆಂಟ್‌ಗಳ ಬಳಕೆಗೆ ಮುನ್ನ ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತದೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ತಿಳಿಸಿದರು.

‘ಅತಿಹೆಚ್ಚು ವಾಹನಗಳು ಸಂಚರಿಸುವ ಮೇಲ್ಸೇತುವೆ ನಿರ್ಮಾಣದ ಹಂತದಲ್ಲೇ ಬಿರುಕು ಕಾಣಿಸಿಕೊಳ್ಳುವಂತಹ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಗುತ್ತಿಗೆದಾರರು ಈ ಸೆಗ್‌ಮೆಂಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಬಿಬಿಎಂಪಿಯೇ ಇದಕ್ಕೆ ಹೊಣೆಯಲ್ಲವೆ? ನಾಗರಿಕರ ಸುರಕ್ಷತೆ ಅತಿ ಮುಖ್ಯ ಅಲ್ಲವೆ’ ಎಂದು ಸ್ಥಳೀಯರಾದ ರಾಮಚಂದ್ರ ಪ್ರಶ್ನಿಸಿದರು.

2025ರ ಡಿಸೆಂಬರ್‌ಗೆ ಪೂರ್ಣ

‘ಕಾಸ್ಟಿಂಗ್‌ ಘಟಕದ ಹಸ್ತಾಂತರದಲ್ಲಾದ ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ಮೇಲ್ಸೇತುವೆ ಕಾಮಗಾರಿ ಕ್ಷಿಪ್ರಗತಿಯಲ್ಲಿ ಆರಂಭವಾಗುವುದಕ್ಕೆ ತೊಡಕಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಸಭೆ ನಡೆಸಿ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಇದೀಗ ಕಾಮಗಾರಿ ಪೂರ್ಣ ವೇಗದಲ್ಲಿ ನಡೆಯುತ್ತಿದೆ’ ಎಂದು ಕಾಮಗಾರಿ ಗುತ್ತಿಗೆ ಪಡೆದಿರುವ ಬಿಎಸ್‌ಸಿಪಿಎಲ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಯ ವರ್ಮಾ ತಿಳಿಸಿದರು.

‘ಕಾಮಗಾರಿಯ ವೇಳಾಪಟ್ಟಿಯನ್ನು ನೀಡಿದ್ದೇವೆ. ಅದರಂತೆ ಪ್ರತಿ ತಿಂಗಳಿನ ಕಾಮಗಾರಿಗಳ ಮಾಹಿತಿ ನೀಡಲಾಗಿದ್ದು ಕಳೆದ ಮೂರು ತಿಂಗಳಿಂದ ನಿಗದಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ. 2025ರ ಡಿಸೆಂಬರ್ ವೇಳಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದರು.

ಪರೀಕ್ಷೆ ನಡೆಸಿ ಬಳಸಲು ಐಐಎಸ್‌ಸಿ ಸಲಹೆ

ಈಜಿಪುರ ಮೇಲ್ಸೇತುವೆಯಲ್ಲಿ ಅಳವಡಿಸಲಾಗಿದ್ದ ಸೆಗ್‌ಮೆಂಟ್‌ನಲ್ಲಿ ಬಿರುಕು ಕಾಣಿಸಿಕೊಂಡ ಪ್ರಕರಣದ ಪರೀಕ್ಷೆ ನಡೆಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ. ಜೆ.ಎಂ. ಚಂದ್ರ ಕಿಶನ್‌ ಅವರು ‘ಎಲ್ಲ ರೀತಿಯ ಪರೀಕ್ಷೆಗಳನ್ನು ಕೈಗೊಂಡೇ ಸೆಗ್‌ಮೆಂಟ್‌ಗಳನ್ನು ಅಳವಡಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘ಸೆಗ್‌ಮೆಂಟ್‌ಗಳ ಸದೃಢತೆಯನ್ನು ರಿಬೌಂಡ್‌ ಹ್ಯಾಮರ್‌ ಮತ್ತು ಯುಪಿವಿ ಪರೀಕ್ಷೆ ಮೂಲಕ ಪರೀಕ್ಷಿಸಿಕೊಳ್ಳಬೇಕು. ಕಾಂಕ್ರೀಟ್‌ನಲ್ಲಿ ಹನಿಕೂಂಬಿಂಗ್‌ ಇದ್ದರೆ ಅವುಗಳ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಬೇಕು’ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಈಜಿಪುರ ಮೇಲ್ಸೇತುವೆಗೆ ಅಳವಡಿಸಲಾಗಿದ್ದ  ಸೆಗ್‌ಮೆಂಟ್‌ನಲ್ಲಿನ ಬಿರುಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.