ADVERTISEMENT

ಲೋಕಸಭಾ ಚುನಾವಣೆ: 7,553 ಶಸ್ತ್ರಾಸ್ತ್ರ ಠೇವಣಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 16:05 IST
Last Updated 24 ಏಪ್ರಿಲ್ 2024, 16:05 IST
ಲೋಕಸಭಾ ಚುನಾವಣೆ 
ಲೋಕಸಭಾ ಚುನಾವಣೆ    

ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಪೊಲೀಸರು, ಸಾರ್ವಜನಿಕರ ಬಳಿಯ 7,553 ಶಸ್ತ್ರಾಸ್ತ್ರಗಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.

‘ನಗರದ ಹಲವರು ಪರವಾನಗಿ ಪಡೆದು ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದರು. ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆ, ಪರವಾನಗಿ ಶಸ್ತ್ರಾಸ್ತ್ರಗಳನ್ನು ಠಾಣೆಗಳಲ್ಲಿ ಠೇವಣಿ ಇರಿಸುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆ 7,553 ಮಂದಿ ತಮ್ಮ ಶಸ್ತ್ರಾಸ್ತ್ರಗಳನ್ನು ಠಾಣೆಯಲ್ಲಿ ಠೇವಣಿ ಇರಿಸಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.

ಕೆಲವರಿಗೆ ರಿಯಾಯಿತಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್ ಹಾಗೂ ಭದ್ರತಾ ಏಜೆನ್ಸಿಗಳು, ಶೂಟಿಂಗ್ ಕ್ರೀಡಾಪಟುಗಳು, ನ್ಯಾಷನಲ್ ರೈಫಲ್ ಅಸೋಸಿಯೇಷನ್ ಸದಸ್ಯರು ಹಾಗೂ ಕೊಡವ ಸಮಾಜದವರಿಗೆ ಶಸ್ತ್ರಾಸ್ತ್ರ ಹೊಂದಲು ಅವಕಾಶವಿದೆ. ಶಸ್ತ್ರಾಸ್ತ್ರ ಠೇವಣಿಯಿಂದ ಅವರಿಗೆ ವಿನಾಯಿತಿ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಕೆಲವರು ಜೀವ ಭಯವಿರುವುದಾಗಿ ಹೇಳಿ ಪರವಾನಗಿ ಶಸ್ತ್ರಾಸ್ತ್ರ ಪಡೆದಿದ್ದರು. ಇಂಥ ಹಲವರು, ಶಸ್ತ್ರಾಸ್ತ್ರ ವಿನಾಯಿತಿ ಕೋರಿ ಮನವಿ ಸಲ್ಲಿಸಿದ್ದರು. ಅವರಿಗೆ ವಿನಾಯಿತಿ ನೀಡಲಾಗಿದೆ. ಉಳಿದಂತೆ ಹಲವು ಪರವಾನಗಿದಾರರು, ತಮ್ಮ ಬಂದೂಕು, ಪಿಸ್ತೂಲ್, ರಿವಾಲ್ವರ್ ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಿದ್ದಾರೆ. ಚುನಾವಣೆ ಬಳಿಕ ಎಲ್ಲವನ್ನೂ ಪರವಾನಗಿದಾರರಿಗೆ ವಾಪಸು ನೀಡಲಾಗುವುದು’ ಎಂದು ಹೇಳಿದರು.

5,117 ಮಂದಿಯಿಂದ ಮುಚ್ಚಳಿಕೆ: ಚುನಾವಣೆ ಸಂದರ್ಭದಲ್ಲಿ ಜನರನ್ನು ಬೆದರಿಸುವ ಹಾಗೂ ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಮಾಹಿತಿ ಮೇರೆಗೆ ನಗರದ 5,117 ಮಂದಿವನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದು ಬಿ.ದಯಾನಂದ್ ಹೇಳಿದರು.

‘ರೌಡಿ ಪಟ್ಟಿಯಲ್ಲಿ ಹೆಸರಿರುವ ಹಾಗೂ ಅಪರಾಧ ಹಿನ್ನೆಲೆಯುಳ್ಳ 5,117 ಮಂದಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಇವರು ಯಾವುದಾದರೂ ಕೃತ್ಯದಲ್ಲಿ ಭಾಗಿಯಾದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.