ADVERTISEMENT

ಬಿಬಿಎಂಪಿ ಚುನಾವಣೆ: ತಡೆಯಾಜ್ಞೆ ತೆರವಿಗೆ ಆಯೋಗದಿಂದ ಅರ್ಜಿ

ತಜ್ಞರ ಸಲಹೆ ಪಡೆದ ರಾಜ್ಯ ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 11 ಮೇ 2022, 20:33 IST
Last Updated 11 ಮೇ 2022, 20:33 IST
   

ಬೆಂಗಳೂರು: ಚುನಾಯಿತ ಕೌನ್ಸಿಲ್‌ಗಳ ಅಧಿಕಾರದ ಅವಧಿ ಪೂರ್ಣಗೊಂಡ ನಂತರ ಸ್ಥಳೀಯ ಸಂಸ್ಥೆಗಳಲ್ಲಿ ನಿರ್ವಾತ ಸೃಷ್ಟಿಯಾಗಲು ಅವಕಾಶ ನೀಡದೇ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗವು ಕಾನೂನು ತಜ್ಞರ ಸಲಹೆ ಪಡೆದಿದೆ. ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಆಯೋಗವು ನಿರ್ಧರಿಸಿದೆ.

‘ಬಿಬಿಎಂಪಿ ಚುನಾವಣೆ ಸಂಬಂಧ ‘ಸುಪ್ರೀಂ’ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ತಕ್ಷಣವೇ ಅರ್ಜಿ ಸಲ್ಲಿಸುತ್ತೇವೆ. ಈ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದು ರಾಜ್ಯ ಸರ್ಕಾರ. ಹಾಗಾಗಿ ನಾವು ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿ ಅರ್ಜಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ಸೂಚನೆಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ’ ಎಂದು ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಬಿಎಂಪಿಗೆ ಚುನಾವಣೆ ನಡೆಸುವುದಕ್ಕೆ ವಾರ್ಡ್‌ಗಳ ಮರುವಿಂಗಡಣೆಯ ಗೊಂದಲ ಗಳನ್ನು ಸುಪ್ರೀಂ ಕೋರ್ಟ್‌ ಸೋಮವಾರ ನೀಡಿರುವ ಆದೇಶವು ನಿವಾರಿಸಿದೆ. ತಡೆಯಾಜ್ಞೆ ತೆರವುಗೊಳ್ಳದೇ ಚುನಾವಣೆ ನಡೆಸುವುದು ಸಮಂಜಸವಾಗದು. ಎಂಬ ಅಭಿಪ್ರಾಯವನ್ನು ಕಾನೂನು ತಜ್ಞರು ನೀಡಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ADVERTISEMENT

‘243 ವಾರ್ಡ್‌ಗಳ ಕರಡು ಸಿದ್ಧ’

‘ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿ ರೂಪಿಸಿರುವ ವಾರ್ಡ್‌ ಮರು ವಿಂಗಡಣೆಯ ಕರಡು ಪಟ್ಟಿ ಸಿದ್ಧವಾಗಿದೆ’ ಎಂದು ಬಿಬಿಎಂಪಿ ಬುಧವಾರ ತಿಳಿಸಿದೆ.

ಸುದ್ದಿಗಾರರ ಜೊತೆ ಮಾತನಾಡಿದ ವಿಶೇಷ ಆಯುಕ್ತ (ಕಲ್ಯಾಣ) ಬಿ.ಶರತ್‌, ‘ಬಿಬಿಎಂಪಿ ವಾರ್ಡ್‌ಗಳನ್ನು ಮರುವಿಂಗಡಣೆಗೊಳಿಸಿ ಅವುಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲಾಗಿದ್ದು, ಇದರ ಕರಡು ಪಟ್ಟಿ ಸಿದ್ಧವಿದೆ. ಇದನ್ನು ಬಹಿರಂಗಪಡಿಸಿ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆ ಸ್ವೀಕರಿಸಿ ಶೀಘ್ರವೇ ಅಂತಿಮಗೊಳಿಸುತ್ತೇವೆ’ ಎಂದು ತಿಳಿಸಿದರು.

243 ವಾರ್ಡ್‌ಗಳ ಮರುವಿಂಗಡಣೆಗೆ ಸರ್ಕಾರ ಬಿಬಿಎಂಪಿ ಒಂದೂವರೆ ವರ್ಷದ ಹಿಂದೆಯೇ ಸಮಿತಿಯನ್ನು ರಚಿಸಿತ್ತು. ಮುಖ್ಯ ಆಯುಕ್ತರ ಅಧ್ಯಕ್ಷತೆಯ ಈ ಸಮಿತಿಯು ಕರಡು ಪಟ್ಟಿಯನ್ನು ಸಿದ್ಧಗೊಳಿಸಿದೆ. ಆದರೆ ಅದನ್ನು ಇನ್ನೂ ಸರ್ಕಾರಕ್ಕೆ ಕಳುಹಿಸಿರಲಿಲ್ಲ.ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ನೀಡಿದ ಬಳಿಕ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ವಾರ್ಡ್‌ಗಳ ಮರು ವಿಂಗಡನೆಕುರಿತು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.