ಬೆಂಗಳೂರು: ಚುನಾವಣೆ ಅಕ್ರಮ ತಡೆ ಕಾರ್ಯಾಚರಣೆಯಲ್ಲಿ ನಗದು, ಮದ್ಯ, ಚಿನ್ನಾಭರಣ, ಉಚಿತ ಉಡುಗೊರೆ ಮತ್ತು ಇತರ ಸ್ವತ್ತುಗಳನ್ನು ವಶಪಡಿಸಿಕೊಳ್ಳುವುದರಲ್ಲಿ ರಾಜ್ಯದ ಚುನಾವಣಾಧಿಕಾರಿಗಳು ದಾಖಲೆ ಬರೆದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು ₹88 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2023 ರ ವಿಧಾನಸಭಾ ಚುನಾವಣೆಯಲ್ಲಿ ₹384 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ದಾಖಲೆ ಬರೆಯಲಾಗಿತ್ತು. ಈಗ ಭಾನುವಾರದವರೆಗೆ ₹ 403.40 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದು, ಹೊಸ ದಾಖಲೆ ಸೃಷ್ಟಿಯಾಗಿದೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ. ಉಳಿದ 14 ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಮೊದಲ ಹಂತದ ಮತದಾನಕ್ಕೂ ಮೊದಲೇ ದಾಖಲೆ ಪ್ರಮಾಣದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 1,975 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಈ ಬಾರಿ 1.46 ಕೋಟಿ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ನಾಟಕ ಪಾನೀಯ ನಿಗಮದ ಉಗ್ರಾಣಗಳು ಮತ್ತು ಕರ್ನಾಟಕ ಉಗ್ರಾಣ ನಿಗಮದ ಗೋದಾಮುಗಳಲ್ಲಿ ದಾಖಲೆಗಳಲ್ಲಿ ನಮೂದಿಸದೇ ಸಂಗ್ರಹಿಸಿದ್ದ ಭಾರಿ ಪ್ರಮಾಣದ ಮದ್ಯವನ್ನು ಚುನಾವಣಾ ಅಕ್ರಮ ತಡೆ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಹಲವೆಡೆ ಮದ್ಯ ತಯಾರಿಕಾ ಘಟಕಗಳಲ್ಲೇ ದಾಖಲೆಗಳಲ್ಲಿ ನಮೂದಾಗದ ಮದ್ಯದ ಪೆಟ್ಟಿಗೆಗಳು ಪತ್ತೆಯಾಗಿವೆ.
ಅಬಕಾರಿ ಕಾಯ್ದೆ ಉಲ್ಲಂಘಿಸಿದ ಮದ್ಯ ಮಾರಾಟಗಾರರು ಮತ್ತು ಸಾರ್ವಜನಿಕರ ವಿರುದ್ಧ 30,000 ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಮಾದಕವಸ್ತು ನಿಯಂತ್ರಣ ಕಾಯ್ದೆಯ ಅಡಿಯಲ್ಲಿ 162 ಪ್ರಕರಣ ದಾಖಲು ಮಾಡಲಾಗಿದೆ.
ಗುಜರಿ ಮೇಲೆ ಕಣ್ಣು: ಕಬ್ಬಿಣ, ತಾಮ್ರ, ಹಿತ್ತಾಳೆಯ ಗುಜರಿ ಸ್ವತ್ತುಗಳನ್ನು ಮಾರಾಟ ಮಾಡಿ, ನಗದು ಸಂಗ್ರಹಿಸಿ ಚುನಾವಣಾ ಅಕ್ರಮಕ್ಕೆ ಬಳಸುತ್ತಿರುವ ಶಂಕೆಯ ಮೇಲೆ ಈ ವಹಿವಾಟುಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ತೀವ್ರ ನಿಗಾ ಇರಿಸಿದೆ. ಒಟ್ಟು ₹ 72.27 ಕೋಟಿ ಮೌಲ್ಯದ ಗುಜರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.