ADVERTISEMENT

ಬೆಂಗಳೂರಿಗೆ ಬಂತು ಎಲೆಕ್ಟ್ರಿಕ್ ಬಸ್; ನವೆಂಬರ್‌ನಲ್ಲಿ ರಸ್ತೆಗೆ ಇಳಿಯಲಿರುವ ಬಸ್‌

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 16:23 IST
Last Updated 30 ಸೆಪ್ಟೆಂಬರ್ 2021, 16:23 IST
ಕೆಂಗೇರಿ ಬಿಎಂಟಿಸಿ ಘಟಕದಲ್ಲಿ ಎಲೆಕ್ಟ್ರಿಕ್ ಬಸ್ ವೀಕ್ಷಿಸಿದ ಸಾರಿಗೆ ಸಚಿವ ಬಿ. ಶ್ರೀರಾಮುಲು. ಬಿಎಂಟಿಸಿ ಅಧ್ಯಕ್ಷ ಎನ್‌.ಎಸ್‌. ನಂದೀಶ್‌ ರೆಡ್ಡಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಇದ್ದರು –ಪ್ರಜಾವಾಣಿ ಚಿತ್ರ
ಕೆಂಗೇರಿ ಬಿಎಂಟಿಸಿ ಘಟಕದಲ್ಲಿ ಎಲೆಕ್ಟ್ರಿಕ್ ಬಸ್ ವೀಕ್ಷಿಸಿದ ಸಾರಿಗೆ ಸಚಿವ ಬಿ. ಶ್ರೀರಾಮುಲು. ಬಿಎಂಟಿಸಿ ಅಧ್ಯಕ್ಷ ಎನ್‌.ಎಸ್‌. ನಂದೀಶ್‌ ರೆಡ್ಡಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭಿಸುವ ಬಿಎಂಟಿಸಿಯ ಬಹು ವರ್ಷಗಳ ಕನಸು ಕೊನೆಗೂ ಸಾಕಾರಗೊಂಡಿದ್ದು, ಮೊದಲ ಎಲೆಕ್ಟ್ರಿಕ್ ಬಸ್ ಬೆಂಗಳೂರಿಗೆ ಬಂದಿಳಿದಿದೆ. ನವೆಂಬರ್‌ನಿಂದ ಮೆಟ್ರೊ ರೈಲು ನಿಲ್ದಾಣಗಳಿಗೆ ಫೀಡರ್ ಸೇವೆಯಾಗಿ ಈ ಬಸ್‌ಗಳು ಸಂಚರಿಸಲಿವೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ 90 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ (ಜಿಸಿಸಿ) ಪಡೆಯಲಾಗುತ್ತಿದೆ. ಜೆಬಿಎಂ ಮತ್ತು ಎನ್‌ಟಿಪಿಸಿ ಸಹಯೋಗದಲ್ಲಿ ಬಸ್‌ಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ನಡೆಯಲಿದೆ.ಚಾಲಕರನ್ನು ಕಂಪನಿಯವರೇ ಒದಗಿಸಲಿದ್ದು, ನಿರ್ವಾಹಕರು ಮಾತ್ರ ಬಿಎಂಟಿಸಿ ನೌಕರರೇ ಇರಲಿದ್ದಾರೆ. ಎನ್‌ಟಿಪಿಸಿ-ಜೆಬಿಎಂ ಕಂಪನಿಗೆ ಪ್ರತಿ ಕಿ.ಮೀಗೆ ₹51.67 ಅನ್ನು ಬಿಎಂಟಿಸಿ ಪಾವತಿಸಬೇಕಿದೆ. ದಿನಕ್ಕೆ ಕನಿಷ್ಠ 180 ಕಿ.ಮೀ ಸಂಚಾರ ಆಗಬೇಕು. ಆಗದಿದ್ದರೂ, ಅದರ ಮೊತ್ತವನ್ನು ಪಾವತಿಸಬೇಕು ಎಂಬ ಒಪ್ಪಂದ ಆಗಿದೆ. ಅಷ್ಟೂ (90) ಬಸ್‌ಗಳು ಡಿಸೆಂಬರ್ ಅಂತ್ಯದ ವೇಳೆಗೆ ರಸ್ತೆಗೆ ಇಳಿಯಲಿವೆ.

ಬೆಂಗಳೂರಿಗೆ ಬಂದ್ ಮೊದಲ ಬಸ್ ಪರೀಕ್ಷಾರ್ಥ ಸಂಚಾರ ಬಿಎಂಟಿಸಿಯ ಕೆಂಗೇರಿ ಘಟಕದ ಆವರಣದಲ್ಲೇ ನಡೆಸಲಾಯಿತು. ಸಾರಿಗೆ ಸಚಿವ ಬಿ.ಶ್ರೀರಾಮುಲು, ಬಿಎಂಟಿಸಿ ಅಧ್ಯಕ್ಷ ‌ಎನ್‌.ಎಸ್‌ .ನಂದೀಶ್ ರೆಡ್ಡಿ, ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್, ಸಾರಿಗೆ ಇಲಾಖೆ‌ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.‌ಅನ್ಬುಕುಮಾರ್ ಬಸ್‌ನಲ್ಲಿ ‌ಕುಳಿತು ಒಂದು ಸುತ್ತು ಸಂಚರಿಸಿದರು.

ADVERTISEMENT

ಆರು ಬ್ಯಾಟರಿಗಳ ಸಹಾಯದಲ್ಲಿ ಬಸ್ ಸಂಚರಿಸುತ್ತದೆ. ಎಡಬದಿಯ ಕೊನೆಯಲ್ಲಿ ಚಾರ್ಜಿಂಗ್ ಪಾಯಿಂಟ್ ಇದೆ. ಒಮ್ಮೆ ಚಾರ್ಜ್ ಮಾಡಿದರೆ 120 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಗತ್ಯ ಎನಿಸಿದರೆ 45 ನಿಮಿಷದಲ್ಲೇ ಮತ್ತೆ ಚಾರ್ಚ್ ಮಾಡಿಕೊಳ್ಳಲು ಸ್ಪೀಡ್ ಚಾರ್ಜರ್ ಅವಕಾಶವೂ ಇದೆ.

ಬಸ್ಸಿನ ಒಳಗೆ ಎರಡು ಮತ್ತು ಬಸ್ಸಿನ ಹಿಂಭಾಗ ಒಂದು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಬಿಎಂಟಿಸಿ ಗಂಟೆಗೆ 75 ಕಿ.ಮೀ. ವೇಗಕ್ಕೆ ಮಿತಿಗೊಳಿಸಿದೆ.

‘ರಾಜಧಾನಿಯ ಬಹು ವರ್ಷಗಳ ಎಲೆಕ್ಟ್ರಿಕ್ ಬಸ್ ಸಂಚಾರದ ಕನಸು ಈಗ ಈಡೇರುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೆಂಬರ್ 1ರಂದು ವಿಧಾನಸೌಧದ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಸೇವೆಗೆ ಚಾಲನೆ ನೀಡಲಿದ್ದಾರೆ’ ಎಂದು ಬಿ. ಶ್ರೀರಾಮುಲು ಹೇಳಿದರು.

‘ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ₹50 ಕೋಟಿ ಅನುದಾನದಲ್ಲಿ ಗುತ್ತಿಗೆ ಮಾದರಿಯಡಿ ಈ ಎಲೆಕ್ಟ್ರಿಕ್ ಬಸ್ ಪಡೆಯಲಾಗುತ್ತಿದೆ. ಈ ಬಸ್‌ಗಳನ್ನು ಮೆಟ್ರೊ ನಿಲ್ದಾಣಗಳಿಗೆ ಫೀಡರ್ ಸೇವೆಯಾಗಿ ನಿಯೋಜಿಸಲಾಗುವುದು. ಹಲವು ವರ್ಷಗಳಿಂದ ಎಲೆಕ್ಟ್ರಿಕ್ ಬಸ್ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಆ ಎಲೆಕ್ಟ್ರಿಕ್ ಬಸ್ ಕನಸು ನನಸಾಗಿದೆ’ ಎಂದರು.

‘ನಾನು ಯಾವತ್ತೂ ಎಲೆಕ್ಟ್ರಿಕ್ ಬಸ್ ನೋಡಿರಲಿಲ್ಲ. ರಾಜ್ಯದ ಖಾಸಗಿ ಸಾರಿಗೆ ಹಾಗೂ ಸರ್ಕಾರಿ ಸಾರಿಗೆಯಲ್ಲಿ ಮೊದಲ ಎಲೆಕ್ಟ್ರಿಕ್ ಬಸ್ ಇದಾಗಿದೆ’ ಎಂದು ಹೇಳಿದರು.

ವಿಶೇಷಗಳೇನು

* 9 ಮೀಟರ್ ಉದ್ದದ ಎರಡು ಬಾಗಿಲಿನ ಬಸ್

* ಆರು ಬ್ಯಾಟರಿಗಳ ಸಹಾಯದಿಂದ ಸಂಚರಿಸುವ ಬಸ್

* ಒಮ್ಮೆ ಚಾರ್ಜ್ ಮಾಡಿದರೆ 120 ಕಿಲೋ ಮೀಟರ್ ಸಂಚಾರ ಸಾಮರ್ಥ್ಯ

* ಗೇರ್, ಕ್ಲಚ್ ಎರಡೂ ಇಲ್ಲ

* ಸ್ಟೇರಿಂಗ್, ಆ್ಯಕ್ಸಿಲೇಟರ್ ಮತ್ತು ಬ್ರೇಕ್‌ ಮಾತ್ರ

* ಚಾಲಕ ಸೇರಿ 34 ಜನ ಕೂರಲು ಆಸನ

* ಮಹಿಳೆಯರಿಗೆ ಪ್ರತ್ಯೇಕ ಆಸನ

* ಪ್ರತಿ ಸೀಟಿನ ಬಳಿಯೂ ಸ್ಟಾಪ್ ಬಟನ್

6 ತಿಂಗಳಲ್ಲಿ 300 ಬಸ್

ಫೇಮ್-2 ಯೋಜನೆಯಡಿ ಬಿಎಂಟಿಸಿಗೆ 12 ಮೀಟರ್ ಉದ್ದದ 300 ಎಲೆಕ್ಟ್ರಿಕ್ ಬಸ್ ಬರಲಿವೆ. ಈ ಸಂಬಂಧ ಅ.8ರಂದು ಬಿಎಂಟಿಸಿಯ ಮಂಡಳಿ ಸಭೆಯಲ್ಲಿ ಈ ಟೆಂಡರ್‌ಗೆ ಅನುಮೋದನೆ ಸಿಗುವ ಸಾಧ್ಯತೆಯಿದೆ ಎಂದು ಶ್ರೀರಾಮುಲು ಹೇಳಿದರು.

‘ಇದಲ್ಲದೇ ಬಿಎಸ್-6 ಮಾದರಿಯ 643 ಡಿಸೆಲ್ ಬಸ್‌ಗಳು ಶೀಘ್ರದಲ್ಲೇ ನಿಗಮಕ್ಕೆ ಸರ್ಪೇಡೆಯಾಗಲಿವೆ. ಸಾರಿಗೆ ನಿಗಮಗಳಲ್ಲಿ ಹಂತ ಹಂತವಾಗಿ ಸುಧಾರಣೆ ತರಲಾಗುವುದು. ಇದಕ್ಕೆ ಮುಖ್ಯಮಂತ್ರಿಗಳು ಸಹಕರಿಸಲಿದ್ದಾರೆ’ ಎಂದರು.‌

ಖಾಸಗೀಕರಣ ಅಲ್ಲ: ಗುತ್ತಿಗೆ ಮಾದರಿಯಡಿ ಎಲೆಕ್ಟ್ರಿಕ್ ಬಸ್ ಪಡೆದ ಮಾತ್ರಕ್ಕೆ ಸಾರಿಗೆ ನಿಗಮ ಖಾಸಗೀಕರಣ ಆಗುವುದಿಲ್ಲ. ಆ ರೀತಿಯ ಯಾವುದೇ ವಾತಾವರಣ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

3 ವರ್ಷದಲ್ಲಿ 1,500 ಎಲೆಕ್ಟ್ರಿಕ್ ಬಸ್

‘ಗ್ರ್ಯಾಂಡ್ ಚಾಲೆಂಜ್’ ಯೋಜನೆಯಡಿ ಇ- ಕಲ್ಚರ್ ಪರಿಕಲ್ಪನೆ ಉತ್ತೇಜಿಸಲು ದೇಶದ 9 ಮಹಾನಗರಗಳಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

‘ಬೆಂಗಳೂರಿಗೆ ಎಷ್ಟು ಬಸ್‌ಗಳ ಅಗತ್ಯವಿದೆ ಎಂಬ ಪಟ್ಟಿ ಒದಗಿಸುವಂತೆ ಕೇಂದ್ರ ಸರ್ಕಾರ ಕೇಳಿದೆ. ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಶೀಘ್ರವೇ ಕೇಂದ್ರಕ್ಕೆ ಮಾಹಿತಿ ಕಳುಹಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ 1,500 ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿ ಸೇರ್ಪಡೆಯಾಗುವ ಸಾಧ್ಯತೆ ಇದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.