ಬೆಂಗಳೂರು: ಮಳೆ–ಗಾಳಿಯಿಂದಾಗಿ ತುಂಡಾದ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಬಾಲಕ ಲುಕ್ಮಾನ್ (12) ಮೃತಪಟ್ಟಿದ್ದು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿರುವುದಾಗಿ ಕುಟುಂಬದವರು ದೂರಿದ್ದಾರೆ.
‘ಯಶವಂತಪುರ ಠಾಣೆ ವ್ಯಾಪ್ತಿಯ ಷರೀಫ್ ನಗರದಲ್ಲಿ ಶನಿವಾರ ಈ ಅವಘಡ ಸಂಭವಿಸಿದೆ. ಬಾಲಕ ಲುಕ್ಮಾನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬಾಲಕ ಲುಕ್ಮಾನ್ ಮನೆ ಮೇಲೆಯೇ ವಿದ್ಯುತ್ ತಂತಿ ಹಾದು ಹೋಗಿದೆ. ಶನಿವಾರ ಸಂಜೆ ಬಾಲಕ ಮನೆ ಮುಂದೆ ಆಟವಾಡುತ್ತಿದ್ದ. ಇದೇ ವೇಳೆ ಬೀಸಿದ ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡರಿಸಿ ಬಾಲಕನ ಮೈ ಮೇಲೆ ಬಿದ್ದಿತ್ತು. ವಿದ್ಯುತ್ ಪ್ರವಹಿಸಿದ್ದರಿಂದ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.’
‘ಬಾಲಕನ ಸಾವಿನ ಬಗ್ಗೆ ಕುಟುಂಬದವರು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೆಸ್ಕಾಂ ನಿರ್ಲಕ್ಷ್ಯದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದರೆ, ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದೂ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.