ADVERTISEMENT

30 ದಿನಗಳೊಳಗೆ ಬಿಲ್‌ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತ: ಬೆಸ್ಕಾಂ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 16:00 IST
Last Updated 30 ಆಗಸ್ಟ್ 2024, 16:00 IST
ಬೆಸ್ಕಾಂ
ಬೆಸ್ಕಾಂ   

ಬೆಂಗಳೂರು: ಬಿಲ್‌ ನೀಡಿದ ನಂತರದ 30 ದಿನಗಳೊಳಗೆ ವಿದ್ಯುತ್‌ ಶುಲ್ಕ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ(ಕೆಇಆರ್‌ಸಿ) ನಿಯಮಾವಳಿ ಅನ್ವಯ ಅಂಥಹ ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಬೆಸ್ಕಾಂ, ‘ಸೆಪ್ಟೆಂಬರ್‌ 1ರಿಂದಲೇ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರು ಬಿಲ್‌ ನೀಡಿದ ದಿನದಿಂದ 30 ದಿನಗಳೊಳಗೆ ಪಾವತಿಸಬೇಕು. ತಪ್ಪಿದರೆ ಮೀಟರ್‌ ರೀಡಿಂಗ್‌ಗೆ ಬರುವ ದಿನ ಅಂದರೆ, ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸಬೇಕು’ ಎಂದು ಮನವಿ ಮಾಡಿದೆ.

ಈವರೆಗೆ, ಪ್ರತಿ ತಿಂಗಳು ಮೀಟರ್‌ ರೀಡಿಂಗ್‌ ಮಾಡಿದ ಬಳಿಕ, ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್‌ ಸಂಪರ್ಕ ಸ್ಥಗಿತಕ್ಕೆ ಲೈನ್‌ಮೆನ್‌ಗಳ ಜೊತೆ ಮಾಪಕ ಓದುಗರು ತೆರಳುತ್ತಿದ್ದರು. ಇನ್ನು ಮುಂದೆ ಮಾಪಕ ಓದುಗರೊಂದಿಗೆ ಲೈನ್‌ಮೆನ್‌ಗಳು ತೆರಳಲಿದ್ದಾರೆ. ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಿಲ್ ನೀಡುವ ಸಮಯದಲ್ಲೇ ವಿದ್ಯುತ್‌ ಸಂಪರ್ಕವನ್ನೂ ಸ್ಥಗಿತಗೊಳಿಸಲಿದ್ದಾರೆ ಎಂದು ತಿಳಿಸಿದೆ.

ADVERTISEMENT

ವಿದ್ಯುತ್‌ ಬಿಲ್‌ ಪಾವತಿಗೆ ಯಾವುದೇ ಬಡ್ಡಿಯಿಲ್ಲದೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆ ನಂತರವೂ ಬಡ್ಡಿ ಸಹಿತ ಪಾವತಿಗೆ 15 ದಿನಗಳ ಕಾಲಾವಕಾಶವಿರುತ್ತದೆ. ಆದರೂ ಗ್ರಾಹಕರು ಬಿಲ್ ಪಾವತಿಸದಿದ್ದಲ್ಲಿ ಮುಂದಿನ‌ ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ₹100 ಗಳಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರಸೀದಿ ಹಾಜರುಪಡಿಸಲು ಸೂಚನೆ:

ಆನ್‌ಲೈನ್ ಮೂಲಕ ವಿದ್ಯುತ್‌ ಬಿಲ್‌ ಪಾವತಿಸಿದ ಸಂದರ್ಭದಲ್ಲಿ ಕೆಲವೊಮ್ಮೆ ಬೆಸ್ಕಾಂ ತಂತ್ರಾಂಶದಲ್ಲಿ(ಸಾಫ್ಟ್‌ವೇರ್‌) ವಿವರ ನಮೂದಾಗದೇ ಇದ್ದಾಗ, ಹಿಂದಿನ ಬಿಲ್‌ ಮೊತ್ತವನ್ನು ತೋರಿಸುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ವಿದ್ಯುತ್‌ ಕಡಿತಕ್ಕೆ ಮುಂದಾದರೆ, ಸಿಬ್ಬಂದಿಗೆ ಬಿಲ್‌ ರಸೀದಿ ತೋರಿಸಿದರೆ, ವಿದ್ಯುತ್‌ ಕಡಿತ ಮಾಡುವುದಿಲ್ಲ ಎಂದು ಬೆಸ್ಕಾಂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.