ADVERTISEMENT

ನಿಮ್ಹಾನ್ಸ್: ಇಸಿಟಿ ಬಗ್ಗೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 22:11 IST
Last Updated 27 ಮಾರ್ಚ್ 2024, 22:11 IST
ನಿಮ್ಹಾನ್ಸ್
ನಿಮ್ಹಾನ್ಸ್   

ಬೆಂಗಳೂರು: ಮಾನಸಿಕ ಅಸ್ವಸ್ಥರಿಗೆ ನೀಡುವ ಎಲೆಕ್ಟ್ರೋ ಕನ್ವಲ್ಸಿವ್ ಥೆರಪಿ (ಇಸಿಟಿ) ಅಥವಾ ‘ಶಾಕ್ ಟ್ರೀಟ್‌ಮೆಂಟ್’ ಬಗ್ಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಜಾಗೃತಿ ಮೂಡಿಸುತ್ತಿದ್ದು, ಸಂಸ್ಥೆಯ ‘ಹೆರಿಟೆಜ್ ಮ್ಯೂಸಿಯಂ’ನಲ್ಲಿ ಈ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರದರ್ಶನ ಪ್ರಾರಂಭಿಸಲಾಗಿದೆ. 

ಮುಂದಿನ ಒಂದು ತಿಂಗಳು ಈ ಪ್ರದರ್ಶನ ನಡೆಯಲಿದೆ. ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳು ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಪ್ರದರ್ಶನ ಇರಲಿದೆ. 2023ರಲ್ಲಿ ನಿಮ್ಹಾನ್ಸ್‌ನಲ್ಲಿ ಮಾನಸಿಕ ಅಸ್ವಸ್ಥತೆಗೆ ಏಳು ಸಾವಿರಕ್ಕೂ ಅಧಿಕ ಮಂದಿ ಇಸಿಟಿ ಪಡೆದಿದ್ದಾರೆ. ಈ ಚಿಕಿತ್ಸೆ ಬಗ್ಗೆ ಇರುವ ಕಳಂಕವನ್ನು ಹೋಗಲಾಡಿಸಲು ನಿಮ್ಹಾನ್ಸ್ ಮುಂದಾಗಿದೆ. 

‌‌‘ಸಂಸ್ಥೆಯಲ್ಲಿ 75 ವರ್ಷಗಳಿಂದ ಈ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಚಿಕಿತ್ಸೆಯ ಬಗ್ಗೆ ಇರುವ ಅಪವಾದ ಮತ್ತು ಕಳಂಕವನ್ನು ಹೋಗಲಾಡಿಸಬೇಕಿದೆ. ಆದ್ದರಿಂದ ಮನೋವೈದ್ಯ ವಿಜ್ಞಾನ ವಿಭಾಗದ ನೆರವಿನಿಂದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನದಲ್ಲಿ ಇಸಿಟಿ ಇತಿಹಾಸವನ್ನೂ ತಿಳಿಸಿಕೊಡಲಾಗುತ್ತದೆ. ಇಸಿಟಿ ಪಡೆದವರ ಅನುಭವ ತಿಳಿಯಲು ಹಾಗೂ ಚಿಕಿತ್ಸೆಯ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಸಂಸ್ಥೆ ತಿಳಿಸಿದೆ. 

ADVERTISEMENT

‘ಈ ಚಿಕಿತ್ಸೆಯ ಲಾಭ ಜನರ ಅರಿವಿಗೆ ಬರಬೇಕು. ಆಗ ಚಿಕಿತ್ಸೆ ಅಗತ್ಯ ಇರುವವರನ್ನು ಗುರುತಿಸಿ, ಚೇತರಿಸಿಕೊಳ್ಳಲು ನೆರವಾಗಬಹುದು’ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.