ಬೆಂಗಳೂರು: ನಗರದಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ಸಲುವಾಗಿ ಸ್ಥಾಪಿಸಿರುವ 112 ಇ–ಚಾರ್ಜಿಂಗ್ ಕೇಂದ್ರಗಳಿಗೆ ಇನ್ನುಮುಂದೆ ಸೌರಶಕ್ತಿಯ ‘ಪವರ್’ ಸಿಗಲಿದೆ.
ಇ–ಚಾರ್ಜಿಂಗ್ (ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಮಾಡುವ ಘಟಕ) ಕೇಂದ್ರಗಳಿಗೆಸೌರಶಕ್ತಿ ವಿದ್ಯುತ್ ಉತ್ಪಾದನಾ ಕಿಟ್ ಅಳವಡಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಿರ್ಧರಿಸಿದೆ. ಕೆ.ಆರ್.ವೃತ್ತದ ಬಳಿಯಿರುವ ಚಾರ್ಜಿಂಗ್ ಕೇಂದ್ರಕ್ಕೆ ಪ್ರಾಯೋಗಿಕವಾಗಿ ಈ ಕಿಟ್‌ಗಳನ್ನು ಅಳವಡಿಕೆ ಮಾಡುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ ನಗರದ ಇತರ ಭಾಗಗಳ ಇ–ಚಾರ್ಜಿಂಗ್ ಕೇಂದ್ರಗಳಲ್ಲೂ ಈ ಸೌಲಭ್ಯ ಕಲ್ಪಿಸಲಾಗುತ್ತದೆ.
ಬೆಸ್ಕಾಂ ಕೈಗೊಳ್ಳುತ್ತಿರುವ ಈ ಕ್ರಮದಿಂದ ಪೆಟ್ರೋಲಿಯಂ ಇಂಧನ ಹಾಗೂ ವಿದ್ಯುತ್ ಬಳಕೆಯನ್ನು ತಗ್ಗಿಸಲು ಸಹಾಯಕವಾಗಲಿದೆ. ಆಗಸ್ಟ್ ಅಂತ್ಯದೊಳಗೆ ಎಲ್ಲ ಇ–ಚಾರ್ಜಿಂಗ್ ಕೇಂದ್ರಗಳು ಬಳಕೆಗೆ ಸಂಪೂರ್ಣ ಸಿದ್ಧವಾಗಲಿವೆ.
ಒಂದು ಬಾರಿ ಕಾರು ಚಾರ್ಜ್ ಮಾಡಿಸಿಕೊಂಡರೆ 120 ಕಿ.ಮೀ.ವರೆಗೂ ಸಂಚರಿಸಲಿದೆ. ಅದೇ ರೀತಿ ಬೈಕ್ ಚಾರ್ಜ್ ಮಾಡಿಕೊಂಡರೆ 60–80 ಕಿ.ಮೀ. ಸಂಚರಿಸಲಿದೆ.
ಯಶಸ್ಸಿನ ಬಳಿಕ ಎಲ್ಲೆಲ್ಲಿ ಅಳವಡಿಕೆ: ಬೆಸ್ಕಾಂ, ವಿಧಾನಸೌಧ, ವಿಕಾಸಸೌಧ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ), ಬಿಬಿಎಂಪಿ ವಾರ್ಡ್ ಕಚೇರಿ, ಸಂಚಾರ ನಿರ್ವಹಣಾ ಕೇಂದ್ರ, ಬಿಎಂಟಿಸಿ ಕಚೇರಿ, ಕರ್ನಾಟಕ ವಸತಿ ಮಂಡಳಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿ, ಮೆಟ್ರೊ (ಬಿಎಂಆರ್‌ಸಿಎಲ್) ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಯ ಆವರಣಗಳಲ್ಲಿ ಇರುವ ಚಾರ್ಜಿಂಗ್ ಕೇಂದ್ರಗಳಿಗೆ ಸೋಲಾರ್ ಸಿಸ್ಟಮ್ ಅಳವಡಿಕೆ ಮಾಡಲಾಗುತ್ತದೆ. ಒಂದೇ ಬಾರಿಗೆ ಮೂರು ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.
ಡಿ.ಸಿ.ಚಾರ್ಜಿಂಗ್ ಕೇಂದ್ರವು ಮಧ್ಯಮವೇಗದ ಚಾರ್ಜಿಂಗ್ ಕೇಂದ್ರವಾಗಿದ್ದು, 15 ಕಿಲೋ ವಾಟ್ ಬ್ಯಾಟರಿ ವಾಹನಗಳನ್ನು (ಕಾರು) 90 ನಿಮಿಷಗಳಲ್ಲಿ ಮತ್ತು ದ್ವಿಚಕ್ರ ವಾಹನಗಳನ್ನು 30 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ. ಎ.ಸಿ.ಚಾರ್ಜಿಂಗ್ ಮಂದಗತಿಯ ಚಾರ್ಜಿಂಗ್ ಕೇಂದ್ರವಾಗಿದ್ದು, 15 ಕಿಲೋ ವಾಟ್ ಬ್ಯಾಟರಿ ವಾಹನವನ್ನು 6 ಗಂಟೆಗಳಲ್ಲಿ ಸಂಪೂರ್ಣವಾಗಿ ಜಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ. ದ್ವಿಚಕ್ರ ವಾಹನಗಳು 1–2 ಗಂಟೆಗಳಲ್ಲಿ ಚಾರ್ಜ್ ಆಗಲಿವೆ.
ಏನೆಲ್ಲಾ ಇರಲಿದೆ?
ಚಾರ್ಜಿಂಗ್ ಕೇಂದ್ರದಲ್ಲಿ ಟ್ರಾನ್ಸ್‌ಫಾರ್ಮರ್, ಕೇಬಲ್ ಅಳವಡಿಕೆ, ಕಾರು ಅಥವಾ ಬೈಕ್ ನಿಲ್ಲಿಸಲು ತಂಗುದಾಣ, ಅಗ್ನಿ ನಂದಕ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸುರಕ್ಷಿತ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ.
ಚಾರ್ಜಿಂಗ್ ಕೇಂದ್ರಗಳಲ್ಲಿ ಸೋಲಾರ್ ಘಟಕ ಅಳವಡಿಸಿದ ಬಳಿಕ ಅಲ್ಲಿ ಆಗುವ ಖರ್ಚು ಲೆಕ್ಕಾಚಾರದಂತೆ ಯುನಿಟ್‌ಗೆ ಎಷ್ಟು ದರ ನಿಗದಿಪಡಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.
‘₹ 4.85 ಪಾವತಿಸಬೇಕು’
ಖಾಸಗಿಯವರೂ ಚಾರ್ಜಿಂಗ್ ಕೇಂದ್ರವನ್ನು ನಿರ್ಮಿಸಲು ಬೆಸ್ಕಾಂ ಅನುಮತಿ ನೀಡಿದೆ. ಅದಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಬೆಸ್ಕಾಂ ಒದಗಿಸಲಿದೆ. ಕೇಂದ್ರ ನಿರ್ಮಾಣವಾದ ಬಳಿಕ ಸಂಸ್ಥೆಗೆ ಅವರು ಯುನಿಟ್‌ಗೆ ₹ 4.85 ಪಾವತಿಸಬೇಕಿದೆ. ಅವರ ಇಚ್ಛೆಯಂತೆ ಗ್ರಾಹಕರಿಗೆ ವಿಧಿಸುವ ದರ ವಿಧಿಸಬಹುದು ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
ಅಂಕಿ–ಅಂಶ
*₹ 4.50 ಕೋಟಿ - ಸೋಲಾರ್ ಘಟಕ ಅಳವಡಿಸಲು ಬೇಕಾದ ಮೊತ್ತ
* 12 - ಡಿ.ಸಿ ಚಾರ್ಜಿಂಗ್ ಕೇಂದ್ರಗಳು (ಮಧ್ಯಮವೇಗದ ಚಾರ್ಜಿಂಗ್ ಕೇಂದ್ರ)
* 100 -ಎ.ಸಿ ಚಾರ್ಜಿಂಗ್ ಕೇಂದ್ರಗಳು (ಮಂದಗತಿಯ ಚಾರ್ಜಿಂಗ್ ಕೇಂದ್ರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.