ಕನಕಪುರ: 'ಹಾರೋಹಳ್ಳಿ ಕೆನರಾ ಬ್ಯಾಂಕ್ ಗ್ರಾಮೀಣ ಮಹಿಳಾ ಸ್ವ ಉದ್ಯೋಗ ತರಬೇತಿ ಸಂಸ್ಥೆಯು 28 ವರ್ಷಗಳಿಂದ ಸುಮಾರು 23 ಸಾವಿರ ಮಹಿಳೆಯರಿಗೆ ವಿವಿಧ ರೀತಿಯ ತರಬೇತಿಯನ್ನು ನೀಡಿದೆ' ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಕೆ.ವಿ.ಕಾಮತ್ ಅವರು ಹೇಳಿದರು.
ತಾಲ್ಲೂಕಿನ ಹಾರೋಹಳ್ಳಿ ಕೆನರಾ ಬ್ಯಾಂಕ್ ಗ್ರಾಮೀಣ ಮಹಿಳಾ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಕಾರ್ಯಾಗಾರ ಮತ್ತು ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸಬಲೀಕರಣಕ್ಕಾಗಿ ಕೆನರಾ ಬ್ಯಾಂಕ್ ಉಚಿತವಾಗಿ ತರಬೇತಿ ಶಿಬಿರವನ್ನು ನಡೆಸುತ್ತಿದೆ. ಈ ಅವಕಾಶವನ್ನು ಅವಕಾಶವನ್ನು ಸ್ಥಳೀಯ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವೈದ್ಯೆ ಡಾ.ಶ್ರುತಿ ಮಾತನಾಡಿ, ‘ವಿಶ್ವ ಮಟ್ಟದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸಮಾಜದಲ್ಲಿ ಮಹಿಳೆಯರಿಗೆ ಸಮಾನವಾದ ಅವಕಾಶಗಳು ಸಿಗಬೇಕು. ಸ್ತ್ರೀಯರನ್ನು ಸಮಾನತೆಯಿಂದ ಕಾಣಬೇಕಿದೆ. ಕಾನೂನಿನ ಹೊರತಾಗಿಯೂ ಮಹಿಳೆಯರಿಗೆ ಎಲ್ಲಾ ಸಂದರ್ಭದಲ್ಲಿ ಸಮಾನತೆ ಸಿಗಬೇಕು’ ಎಂದು ಹೇಳಿದರು.
ಡಾ.ಅಪೂರ್ವ ಕಣ್ಣಿನ ತಪಾಸಣೆ ಮಾಡಿದರು. ಅವರು ಮಾತನಾಡಿ ‘ನಾವು ಸತ್ತಮೇಲೆ ಕಣ್ಣು ಮಣ್ಣಾಗುವುದರ ಬದಲು ಅದು ಜೀವಂತವಾಗಿ ಇನ್ನೊಬ್ಬರ ಪಾಲಿಗೆ ಬೆಳಕಾಗುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.
ಹಾರೋಹಳ್ಳಿ ರೋಟರಿ ಮಾಜಿ ಅಧ್ಯಕ್ಷ ಮಹಮ್ಮದ್ ಏಜಾಸ್ ಮಾತನಾಡಿದರು. ಮಹಿಳಾ ಉದ್ಯಮಿ ಪುಷ್ಪವತಿ ಮತ್ತು ಗಾಯಿತ್ರಿ ಶಿಲ್ಪಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.