ಬೆಂಗಳೂರು: ಭಾರತದ ಹೆಮ್ಮೆಯ ‘ಹುಲಿ ಯೋಜನೆ’ಯ ಸುವರ್ಣ ಮಹೋತ್ಸವದ ನೆನಪಿಗಾಗಿ ಹಾಗೂ ಜಾಗತಿಕ ಜೀವವೈವಿಧ್ಯ ಆಚರಣೆ ಹಿನ್ನೆಲೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿರುವ ನಿವೃತ್ತ ಅರಣ್ಯಾಧಿಕಾರಿ ಹಾಗೂ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಎಂ.ಎನ್.ಜಯಕುಮಾರ್ ಅವರ ಏಕವ್ಯಕ್ತಿ ‘ವನ್ಯಜೀವಿ ಛಾಯಾಚಿತ್ರ’ ಪ್ರದರ್ಶನ ‘ಎನ್‌ಕೌಂಟರ್ಸ್ ಇನ್ ದಿ ವೈಲ್ಡ್ 2.0‘ಗೆ ಗುರುವಾರ ಚಾಲನೆ ನೀಡಲಾಯಿತು.
ಜಯಕುಮಾರ್ ಅವರು ಭಾರತ, ಆಗ್ನೇಯ ಏಷ್ಯಾ, ಆಫ್ರಿಕಾ ಮತ್ತು ಅಮೆರಿಕದ ಅರಣ್ಯಗಳಲ್ಲಿ ಸೆರೆ ಹಿಡಿದಿರುವ 231 ವೈವಿಧ್ಯಮಯ ವನ್ಯಜೀವಿಗಳ ಛಾಯಾಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಅಕ್ಟೋಬರ್ 8ರವರೆಗೆ ಛಾಯಾಚಿತ್ರ ಪ್ರದರ್ಶನಗೊಳ್ಳಲಿದೆ.
ಪ್ರತಿ ಛಾಯಾಚಿತ್ರದ ಎದುರು ಇಟ್ಟಿರುವ ಫಲಕದಲ್ಲಿ ಕ್ಯೂಆರ್ ಕೋಡ್ ನೀಡಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ, ಫೋಟೊದಲ್ಲಿನ ವನ್ಯಜೀವಿಗಳ ವಿವರ ಇಂಗ್ಲಿಷ್‌ನಲ್ಲಿ ಲಭ್ಯವಾಗುತ್ತದೆ. ವಿವರವನ್ನು ಓದಬಹುದು ಹಾಗೂ ಹೆಡ್‌ಫೋನ್ ಬಳಸಿ ಕೇಳಲೂಬಹುದು.
ಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ಪ್ರದರ್ಶನವಿದೆ. ಮೊದಲ ಗ್ಯಾಲರಿಯಲ್ಲಿ ‘ಹುಲಿ ಯೋಜನೆ’ಯ ನೆನಪಿಗಾಗಿ ಹುಲಿಗಳ ಛಾಯಾಚಿತ್ರ ಪ್ರದರ್ಶಿಸಲಾಗಿದೆ. ಎರಡನೇ ಗ್ಯಾಲರಿಯಲ್ಲಿ ಏಷ್ಯಾದ ವನ್ಯಜೀವಿಗಳು, ಮೂರನೇ ಗ್ಯಾಲರಿಯಲ್ಲಿ ಆಫ್ರಿಕಾದ ವನ್ಯಜೀವಿಗಳ ಚಿತ್ರಗಳಿವೆ. ನಾಲ್ಕನೇ ಗ್ಯಾಲರಿಯಲ್ಲಿ ‘ಕಲರ್ಸ್ ಆಫ್ ನೇಚರ್’ ಶೀರ್ಷಿಕೆಯಡಿ ವೈವಿಧ್ಯಮಯ ಪಕ್ಷಿಗಳ ಛಾಯಾಚಿತ್ರಗಳ ಪ್ರದರ್ಶನವಿದೆ.
ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7.30ರ ವರೆಗೆ ಪ್ರದರ್ಶನವಿರುತ್ತದೆ. ಜೊತೆಗೆ ನಿತ್ಯ ಸಂಜೆ 5.30 ರಿಂದ 7.30ರ ವರೆಗೆ ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಛಾಯಾಗ್ರಹಣ ಮತ್ತು ಚಿತ್ರ ನಿರ್ಮಾಣ ತಜ್ಞರಿಂದ ವಿಚಾರ ಮಂಡನೆ, ಪ್ರೇಕ್ಷಕರೊಂದಿಗೆ ಸಂವಾದವೂ ಇದೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.