ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದ 1,000 ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಲಿರುವ ಇಂಗ್ಲಿಷ್ ಮಾಧ್ಯಮದ ಪಠ್ಯ ಪುಸ್ತಕ ಮತ್ತು ಈಗಿರುವ ಕನ್ನಡ ಮಾಧ್ಯಮ ಪಠ್ಯ ಪುಸ್ತಕಗಳನ್ನು ಒಂದೇ ಬೈಂಡಿಂಗ್‌ನಲ್ಲಿ ವಿತರಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
‘ನಿರ್ದಿಷ್ಟ ವಿಷಯದ ಪಠ್ಯವು ಎರಡು ಭಾಗಗಳನ್ನು ಹೊಂದಿರುತ್ತದೆ. ಒಂದು ಭಾಗ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹಾಗೂ ಮತ್ತೊಂದು ಭಾಗ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಇರುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಈ ಪಠ್ಯಪುಸ್ತಕವನ್ನು ವಿತರಿಸಲಾಗುತ್ತದೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.
‘ಇಂಗ್ಲಿಷ್ ಮಾಧ್ಯಮದ ಪಾಠಗಳನ್ನು ಹೊಂದಿರುವ ಪಠ್ಯವನ್ನು ವಿತರಿಸಿರುವುದರಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಕಲಿಕೆಯಲ್ಲಿಯೂ ಸುಧಾರಣೆ ಆಗುತ್ತದೆ. ಹಾಗಾಗಿ ಇದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಗಣಿತ ಮತ್ತು ಇಂಗ್ಲಿಷ್‌ಗೆ ಎನ್‌ಸಿಇಆರ್‌ಟಿ ಪಠ್ಯಕ್ರಮ ಅನುಸರಿಸಲಾಗುತ್ತಿದೆ. ಪರಿಸರ ವಿಜ್ಞಾನ ಮತ್ತು ಕನ್ನಡ ವಿಷಯಗಳಿಗೆ ರಾಜ್ಯದ ಪಠ್ಯವನ್ನೆ ಅಳವಡಿಸಿಕೊಳ್ಳಲಾಗುತ್ತದೆ. ಈ ತರಗತಿಯ ಪಠ್ಯಗಳು ಹೆಚ್ಚು ಚಿತ್ರಗಳನ್ನು ಹಾಗೂ ಕಡಿಮೆ ಸಾಲುಗಳ ಪಾಠಗಳನ್ನು ಹೊಂದಿರುತ್ತವೆ. ಹಾಗಾಗಿ ಅನುವಾದ ಕಾರ್ಯವೂ ಆದಷ್ಟು ಬೇಗ ಮುಗಿಯಲಿದೆ’ ಎಂದರು.
ಬೆಂಗಳೂರಿನಲ್ಲಿ 112 ಇಂಗ್ಲಿಷ್ ಮಾಧ್ಯಮ: ಬೆಂಗಳೂರಿನ 112 ಸರ್ಕಾರಿ ಶಾಲೆಗಳು ಸೇರಿದಂತೆ ರಾಜ್ಯದ 1,000 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಬೆಳಗಾವಿಯ 73 ಶಾಲೆಗಳು, ಕೊಡಗಿನ 8 ಶಾಲೆಗಳು ಸೇರಿವೆ ಎನ್ನಲಾಗುತ್ತಿದೆ.
‘ಮಕ್ಕಳಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಸೆಮಿಸ್ಟರ್ ಪಠ್ಯಗಳನ್ನು ಎರಡು ಪುಸ್ತಕಗಳಲ್ಲಿ ವಿತರಿಸಲು ಆರಂಭಿಸಿದರು. ಈಗ ಮತ್ತೆ ಪಠ್ಯದ ಹೊರೆಯನ್ನು ಹೆಚ್ಚಿಸುತ್ತಿದ್ದಾರೆ’ ಎಂದು ಪೋಷಕರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.