ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ ಮರುಅಭಿವೃದ್ಧಿ ಕಾಮಗಾರಿ ಚುರುಕುಗೊಂಡಿದೆ. ಅದಕ್ಕಾಗಿ ಫ್ಲಾಟ್ ಫಾರಂ 1 ಕಡೆಯಿಂದ (ಯಶವಂತಪುರ ಮಾರುಕಟ್ಟೆ ಕಡೆಯಿಂದ) ಪ್ರವೇಶವನ್ನು ಜುಲೈ 17ರ ಮಧ್ಯರಾತ್ರಿಯಿಂದ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಸಾರ್ವಜನಿಕರು ಫ್ಲಾಟ್‌ಫಾರ್ಮ್ 6 ಕಡೆಯಿಂದ ಅಂದರೆ ಯಶವಂತಪುರ ಮೆಟ್ರೊ ರೈಲು ನಿಲ್ದಾಣ ಕಡೆಯಿಂದ ಇರುವ ಪ್ರವೇಶವನ್ನು ಬಳಸಿಕೊಳ್ಳಬೇಕು. ಎಲ್ಲ ಫ್ಲಾಟ್‌ಫಾರ್ಮ್‌ಗಳು ಎರಡೂ ಬದಿಗಳಲ್ಲಿ ಪಾದಚಾರಿ ಸೇತುವೆ ಸಂಪರ್ಕ ಹೊಂದಿವೆ. ನಿಗದಿತ ಶುಲ್ಕ ನೀಡಿ ಬಳಸಬಹುದಾದ ಬ್ಯಾಟರಿ ಚಾಲಿತ ಕಾರ್ ವ್ಯವಸ್ಥೆಯೂ ಇದೆ. ವಾಹನ ನಿಲುಗಡೆ ವ್ಯವಸ್ಥೆ ಕೂಡ ಯಶವಂತಪುರ ಮಾರುಕಟ್ಟೆ ಕಡೆಯಿಂದ ಇರುವುದಿಲ್ಲ
ನಿಲ್ದಾಣದಲ್ಲಿ ಡಿಜಿಟಲ್ ಮಾಹಿತಿ ಫಲಕಗಳ ಸೇವೆಯನ್ನು ಕೆಲವು ದಿನಗಳ ಕಾಲ ಸ್ಥಗಿತ ಗೊಳಿಸಲಾಗಿದೆ. ಈ ಅವಧಿಯಲ್ಲಿ ಹಸ್ತಚಾಲಿತ ಪ್ರಕಟಣೆಗಳ ಮೂಲಕ ಮಾಹಿತಿಯನ್ನು ಪ್ರಸಾರ ಮಾಡಲಾಗುವುದು. ಪ್ರಯಾಣಿಕರು ಯಾವುದೇ ಸಹಾಯಕ್ಕಾಗಿ ಸ್ಟೇಷನ್ ಮಾಸ್ಟರ್, ಡೆಪ್ಯುಟಿ ಸ್ಟೇಷನ್ ಮಾಸ್ಟರ್, ಮುಖ್ಯ ಟಿಕೆಟ್ ಇನ್‌ಸ್ಪೆಕ್ಟರ್ ಅಥವಾ ಟಿಕೆಟ್ ತಪಾಸಣೆ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಮಗಾರಿ ಚುರುಕು: ₹ 377 ಕೋಟಿ ವೆಚ್ಚದಲ್ಲಿ ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಯ 1ನೇ ಹಂತದ ಕಾಮಗಾರಿ ಶುರುವಾಗಿದೆ. ಮಾರುಕಟ್ಟೆ ಬದಿಯ ಎಲಿವೇಟೆಡ್ ರಸ್ತೆ ಕಾಮಗಾರಿ, ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿ ಇತ್ತೀಚೆಗೆ ಆರಂಭಿಸಲಾಗಿದೆ. ಲಿನೆನ್ ಸ್ಟೋರ್ ಮತ್ತು ಆರ್‌ಪಿಎಫ್‌ನಂಥ ರೈಲ್ವೆ ಕಚೇರಿಗಳು ನೆಲಮಹಡಿಯವರೆಗೆ ಪೂರ್ಣಗೊಂಡಿವೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಫೆಬ್ರುವರಿಯಲ್ಲಿ ಆರಂಭಗೊಂಡಿದ್ದ ಕಾಮಗಾರಿ ಇತ್ತೀಚೆಗೆ ವೇಗ ಪಡೆದುಕೊಂಡಿದೆ. 2025ರ ಜುಲೈ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮೆಟ್ರೊ ಬದಿಯ ಪ್ರವೇಶದಲ್ಲಿ ಹೊಸ ನಿಲ್ದಾಣದ ಕಟ್ಟಡ, ಮಾರುಕಟ್ಟೆ ಬದಿಯಲ್ಲಿ ಎಲಿವೇಟೆಡ್ ರಸ್ತೆ, ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ 216 ಮೀಟರ್ ಉದ್ದದ ಏರ್ ಕಾನ್ಕೋರ್ಸ್, ಲಾಂಜ್, ವೇಟಿಂಗ್ ಹಾಲ್‌ಗಳು, ಕಿಯೋಸ್ಕ್‌ಗಳು, ಚಿಲ್ಲರೆ ಅಂಗಡಿಗಳು, ಎಸ್ಕಲೇಟರ್‌ಗಳು, ಲಿಫ್ಟ್‌ಗಳು ಇತ್ಯಾದಿಗಳನ್ನು ಪುನರಾಭಿವೃದ್ಧಿ ಯೋಜನೆ ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.