ADVERTISEMENT

ಪರಿಸರದ ಮಹತ್ವ ಸಾರಿದ ‘ಆಲ್ಟರ್ನಟಿವ್ 22’

ನಗರದ ತೆರೆಮರೆಯ ಸಾಧಕರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 20:17 IST
Last Updated 5 ಜೂನ್ 2022, 20:17 IST
ಆಯನ ಡಾನ್ಸ್‌ ಅಕಾಡೆಮಿ ಕಲಾವಿದರು ‘ಪಂಚತತ್ವ’ ಶೀರ್ಷಿಕೆಯಡಿ ನೃತ್ಯ ಪ್ರದರ್ಶಿಸಿದರು    – ಪ್ರಜಾವಾಣಿ ಚಿತ್ರ
ಆಯನ ಡಾನ್ಸ್‌ ಅಕಾಡೆಮಿ ಕಲಾವಿದರು ‘ಪಂಚತತ್ವ’ ಶೀರ್ಷಿಕೆಯಡಿ ನೃತ್ಯ ಪ್ರದರ್ಶಿಸಿದರು    – ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಶ್ವ ಪರಿಸರ ದಿನದ ಪ್ರಯುಕ್ತ ವಿಮೊವೆ ಫೌಂಡೇಷನ್ ನಗರದಲ್ಲಿ ಭಾನುವಾರ ‘ಆಲ್ಟರ್ನಟಿವ್ 22’ (ಪರ್ಯಾಯ) ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ತೆರೆಮರೆಯ ಸಾಧಕರನ್ನು ಗೌರವಿಸಲಾಯಿತು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ನಗರದ ತೆರೆಮರೆಯ ಸಾಧಕರಾದ ಹರ್ಷಿತ್ ರೆಡ್ಡಿ, ರಕ್ಷಿತ್ ಪವಾರ್, ಎಡ್ವಿನ್ ಜೋಸೆಫ್ ಹಾಗೂ ನಾಗರಾಜ್ ಅವರನ್ನು ಗೌರವಿಸಿ, ಅವರ ಬಗೆಗಿನ 30 ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. ಇವರು ಪ್ರಾಣಿ–ಪಕ್ಷಿಗಳ ಸಂರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯಗಳ ಮರುಬಳಕೆ ಸೇರಿ ವಿವಿಧ ಕಾರ್ಯವನ್ನು ಕೈಗೊಂಡಿದ್ದಾರೆ.

ಯೂತ್ ಆಫ್ ಇಂಡಿಯಾ ಫೌಂಡೇಷನ್ ಮುಖ್ಯಸ್ಥ ಶೈಲೇಶ್ ಸಿಂಘಾಲ್ ಮತ್ತು ‘ವಾಟರ್‌ ಗರ್ಲ್’ ಎಂದು ಜನಪ್ರಿಯ ಆಗಿರುವ ಗರ್ವಿತಾ ಗುಲಾಟಿ ಅವರು ಪ್ರಕೃತಿಯ ಮಹತ್ವದ ಬಗ್ಗೆ ವಿವರಿಸಿ, ‘ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಯುವಜನರು ಕಾರ್ಯಪ್ರವೃತರಾಗಬೇಕು’ ಎಂದು ಅವರು ಕರೆ ನೀಡಿದರು.

ADVERTISEMENT

ಯುವಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಾಕ್ಷ್ಯಚಿತ್ರವನ್ನುವಿಮೊವೆ ಫೌಂಡೇಷನ್ ಹೊರತಂದಿದ್ದು, ಅದನ್ನು ಬಿಡುಗಡೆ ಮಾಡಲಾಯಿತು.ಆಯನ ಡಾನ್ಸ್ ಅಕಾಡೆಮಿಯಿಂದ ‘ಪಂಚತತ್ವ’ ಶೀರ್ಷಿಕೆಯಡಿ ನೃತ್ಯ ಪ್ರದರ್ಶನ ನಡೆಯಿತು. ಕಲಾವಿದರು ಅಗ್ನಿ, ಜಲ, ವಾಯು, ಪೃಥ್ವಿ ಹಾಗೂ ಆಕಾಶದ ಮಹತ್ವವನ್ನು ನೃತ್ಯದ ಮೂಲಕ ಪ್ರಸ್ತುತಪಡಿಸಿದರು.

ಪರಿಸರ ನಾಶದಿಂದ ಅಪಾಯ: ಇನ್ಫೊಸಿಸ್ ಸಂಸ್ಥೆಯ ಮಾಜಿ ನಿರ್ದೇಶಕ ವಿ.ಎ. ಶಾಸ್ತ್ರಿ, ‘ಕೈಗಾರೀಕರಣ, ನಗರೀಕರಣದ ಹೆಸರಿನಲ್ಲಿ ಪರಿಸರ ನಾಶಮಾಡಲಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯಯುತ ಜೀವನಕ್ಕೆ ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯ’ ಎಂದು ಹೇಳಿದರು.

ಫೌಂಡೇಷನ್‌ನ ಸಂಸ್ಥಾಪಕ ವಿನಯ್ ಶಿಂಧೆ, ‘ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಮಾಡಲಾಗುತ್ತಿದೆ.ಕೋವಿಡ್ ಕಾಣಿಸಿಕೊಂಡ ಬಳಿಕ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿ, ನಲುಗಿ ಹೋಯಿತು. ನಮ್ಮ ಫೌಂಡೇಷನ್‌ನಿಂದ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಪಡಿತರ ಕಿಟ್‌ಗಳನ್ನು ವಿತರಣೆ ಮಾಡಲಾಯಿತು’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.