ಬೆಂಗಳೂರು: ನಗರದ ದಾಸಾಶ್ರಮ ಕೇಂದ್ರದಲ್ಲಿ ಇಪಿಎಸ್–95 ರಾಷ್ಟ್ರೀಯ ಸಂಘರ್ಷ ಸಮಿತಿಯ ಸಂಸ್ಥಾಪನಾ ದಿನ ಹಾಗೂ ಪರಿಸರ ದಿನವನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.
ನಂತರ ನಡೆದ ಸಮಿತಿ ಸಮಾವೇಶದಲ್ಲಿ ‘ರಾಷ್ಟ್ರೀಯ ಸಂಘರ್ಷ ಸಮಿತಿಗೆ ಇನ್ನಷ್ಟು ಇಪಿಎಸ್-95 ಪಿಂಚಣಿದಾರರನ್ನು ಸೇರಿಸಿ ಸಮಿತಿಯ ಒಗ್ಗಟ್ಟನ್ನು ಬಲಪಡಿಸಿ ತಮ್ಮ ಬೇಡಿಕೆಗಳ ಇತ್ಯರ್ಥಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ಪ್ರತಿಜ್ಞಾವಿಧಿಯನ್ನು ಸಮಿತಿ ಸದಸ್ಯರು ಸ್ವೀಕರಿಸಿದರು.
ಹೊಸ ಸರ್ಕಾರಕ್ಕೆ ಕರ್ನಾಟಕದಿಂದ ಆಯ್ಕೆಯಾಗಿರುವ 28 ಲೋಕಸಭಾ ಸದಸ್ಯರಿಗೆ ಇಪಿಎಸ್-95 ಪಿಂಚಣಿದಾರರ ಸಂಕಷ್ಟಗಳನ್ನು ಮನವರಿಕೆ ಮಾಡಬೇಕು. ಮೂರು ಬೇಡಿಕೆಗಳಾದ ₹7,500 ಕನಿಷ್ಠ ಪಿಂಚಣಿ ನಿಗದಿ, ಡಿ.ಎ. ಹಾಗೂ ಪಿಂಚಣಿದಾರರ ಕುಟುಂಬಕ್ಕೆ ಜೀವಮಾನ ಪರ್ಯಂತ ಉಚಿತ ವೈದ್ಯಕೀಯ ವಿಮೆ ಒದಗಿಸುವಂತೆ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲು ಅವರ ಮನೆ ಹಾಗೂ ಕಚೇರಿಯ ಹತ್ತಿರ ಧರಣಿ ಕೂರಲು ಸಭೆಯಲ್ಲಿ ತೀರ್ಮಾನಿಸಿದರು.
ರಾಷ್ಟ್ರೀಯ ಸಂಘರ್ಷ ಸಮಿತಿಯ ರಮಾಕಾಂತ ನರಗುಂದ, ಜಿ.ಎಸ್.ಎಂ. ಸ್ವಾಮಿ, ಸಿ.ಎಸ್. ಮಂಜುನಾಥ, ವಿ.ಕೆ. ಗಡದ್, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನಿವೃತ್ತರ ಸಂಘದ ಅಧ್ಯಕ್ಷ ಶಂಕರ್ ಕುಮಾರ್, ಕಾರ್ಯಾಧ್ಯಕ್ಷ ನಂಜುಂಡೇಗೌಡ, ಉಪಾಧ್ಯಕ್ಷ ಸುಬ್ಬಣ್ಣ, ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.