ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಲು ಉದ್ದೇಶಿಸಿರುವ ಅಷ್ಟಪಥ ಗಳ ಪೆರಿಫೆರಲ್ ಹೊರವರ್ತುಲ ರಸ್ತೆಗೆ (ಪಿಆರ್‌ಆರ್) ಕೇಂದ್ರ ಪರಿಸರ ಸಮಿತಿ ಅನುಮತಿ ಪಡೆದಿದೆ.
73.5 ಕಿ.ಮೀ. ರಸ್ತೆಯು ಆರು ಕೆರೆಗಳು ಮತ್ತು ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಮೂಲಕ ಈ ಹೊರವರ್ತುಲ ರಸ್ತೆ ಹಾದು ಹೋಗುತ್ತದೆ. ಯೋಜನೆಗೆ 32,175 ಮರಗಳನ್ನು ಕಡಿಯಬೇಕಾಗಿದೆ ಎಂದು ಪರಿಸರ ಮೌಲ್ಯಮಾಪನ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 2014ರಲ್ಲಿ ರಾಜ್ಯ ಪರಿಸರ ಪ್ರಾಧಿಕಾರ ನೀಡಿದ್ದ ಅನುಮತಿಯನ್ನು ಎನ್‌ಜಿಟಿ ರದ್ದುಗೊಳಿಸಿತ್ತು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಿಸರ ವ್ಯತ್ಯಯ ಕುರಿತು ತಪ್ಪು ಅಂದಾಜು ಮಾಡಿದ್ದಕ್ಕಾಗಿ ಟೀಕೆಗೆ ಒಳಗಾಗಿತ್ತು. ಯೋಜನೆಗಾಗಿ 200 ಮರಗಳನ್ನು ಮಾತ್ರ ಕಡಿಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ನಂತರ ಈ ಸಂಖ್ಯೆ 16,685ಕ್ಕೆ ಏರಿತು. ಕಳೆದ ವರ್ಷದ ಪರಿಷ್ಕೃತ ವರದಿಯಲ್ಲಿ 32,175 ಮರಗಳನ್ನು ತೆರವುಗೊಳಿಸುವ ಪ್ರಸ್ತಾವ ಮಾಡಲಾಗಿತ್ತು.
ಕಡಿದಷ್ಟೇ ಗಿಡಗಳನ್ನು ಬೆಳೆಸಬೇಕು, ಪಾರಂಪರಿಕ ಮರಗಳನ್ನು ಕಡಿಯಬಾರದು, ಮಳೆ ನೀರನ್ನು ಸಂಗ್ರಹ ಸೇರಿದಂತೆ 20ಕ್ಕೂ ಹೆಚ್ಚು ನಿರ್ದೇಶನಗಳನ್ನು ಬಿಡಿಎ ಪಾಲಿಸಬೇಕು ಎಂಬ ಷರತ್ತಿನೊಂದಿಗೆ ಅದೇ ಪ್ರಸ್ತಾವವನ್ನು ಕೇಂದ್ರ ಪರಿಸರ, ಅರಣ್ಯ ಹವಾಮಾನ ಬದಲಾವಣೆ ಸಚಿವಾಲಯದ ಕೇಂದ್ರ ಸಮಿತಿ ಅನುಮತಿ ನೀಡಿದೆ.
ಅಷ್ಟ ಪಥಗಳ ರಸ್ತೆ ಆರು ಕೆರೆಗಳ ಮೂಲಕ ಅಥವಾ ಪಕ್ಕದಲ್ಲಿ ಹಾದು ಹೋಗುತ್ತಿದೆ. ಪಾರಂಪರಿಕ ಮರಗಳು ಅಥವಾ ನೀರಿನ ಕೋಳಿಗಳಿಗೆ (ಪೆಲಿಕಾನ್‌ಗಳು, ಕೊಕ್ಕರೆಗಳು ಇತ್ಯಾದಿ) ಆಸರೆಯಾಗಿರುವ ಮರಗಳಿಗೆ ಹಾನಿಯಾಗುವ ಸಂದರ್ಭವಿದ್ದರೆ, ಮಾರ್ಗ ಬದಲಾಯಿಸುವಂತೆ ಸಮಿತಿ ಸಲಹೆ ನೀಡಿದೆ. ಭೂ ಪರಿಹಾರದ ಜತೆಗೆ, ಬೆಳೆ ನಷ್ಟಕ್ಕೂ ಪರಿಹಾರ ನೀಡಬೇಕು ಎಂದು ಸೂಚಿಸಿದೆ.
ಜಾರಕಬಂಡೆಯಲ್ಲಿ ಸೇತುವೆ: ಜಾರಕಬಂಡೆ ಮೀಸಲು ಅರಣ್ಯದ ಸುಮಾರು 20 ಎಕರೆ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲು ಅರಣ್ಯ ಸಲಹಾ ಸಮಿತಿಯ ಅನುಮತಿ ಪಡೆಯಬೇಕಿದೆ. ಈ ಪ್ರದೇಶದಲ್ಲಿ ಸಾಕಷ್ಟು ಪ್ರಾಣಿ, ಪಕ್ಷಿಗಳು ನೆಲೆಸಿವೆ.
‘ರಸ್ತೆಯು ಅರಣ್ಯವನ್ನು ಎರಡು ಭಾಗಗಳಾಗಿ ವಿಭಜಿಸಬಾರದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಪ್ರಾಣಿಗಳಿಗೆ ಓಡಾಟಕ್ಕೆ ತೊಂದರೆಯಾಗದಂತೆ ರಸ್ತೆಯ ಮಟ್ಟ ಹೆಚ್ಚಿಸುವ ಪ್ರಸ್ತಾವ ಮುಂದಿಡುತ್ತಿದ್ದೇವೆ’ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪೂರ್ಣಗೊಳಿಸುವತ್ತ ಬಿಡಿಎ ಚಿತ್ತ ನೆಟ್ಟಿದೆ. 2007ರಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ್ದರೂ, ಗೊಂದಲ ಮುಂದುವರಿದಿದೆ. ನ್ಯಾಯಯುತ ಪರಿಹಾರಕ್ಕೆ ಹಲವು ರೈತರು ಆಗ್ರಹಿಸಿದ್ದಾರೆ.
ಗೊಂದಲಗಳಿಂದಾಗಿ ಅಂದಾಜು ₹ 21 ಸಾವಿರ ಕೋಟಿ ವೆಚ್ಚದ ಟೆಂಡರ್‌ಗಳನ್ನು ರದ್ದುಗೊಳಿಸಲಾಗಿದೆ. ವೆಚ್ಚದ ಅಂತಿಮ ನಿರ್ಧಾರಕ್ಕಾಗಿ ಸಂಪುಟಕ್ಕೆ ಪ್ರಸ್ತಾವನೆ ಕಳುಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.