ಬೆಂಗಳೂರು: ಆಧುನೀಕರಣದ ಭರಾಟೆಯಲ್ಲಿ ಪರಿಸರ ಹಾಳಾಗದಂತೆ ಎಚ್ಚರವಹಿಸಿ, ಸುಸ್ಥಿರ ಅಭಿವೃದ್ಧಿ ಯೋಜನೆ ಅನುಷ್ಠಾನ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕು ಎಂದು ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ ಕ್ಲಸ್ಟರ್ ಅಧ್ಯಕ್ಷ ಹರೀಶ್ ಬರ್ಶೀಲಿಯಾ ಹೇಳಿದರು.
ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ ಸೋಮವಾರ ಆಯೋಜಿಸಿದ್ದ ‘ಎಂಜಿನಿಯರಿಂಗ್ ವಿಜ್ಞಾನದಲ್ಲಿ ಇತ್ತೀಚಿಗಿನ ಬೆಳವಣಿಗೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಒಂದು ಟನ್ ಉಕ್ಕು ಉತ್ಪಾದನೆಗೆ ಒಂದು ಟನ್ ಇಂಗಾಲದ ಡೈ ಆಕ್ಸೈಡ್ ಬೇಕು. ಇದರಿಂದ ಪರಿಸರ ಮಾಲಿನ್ಯವಾಗಲಿದೆ. 2070ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆ ಸೃಷ್ಟಿಸುವುದಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ರೀತಿ ಮಾಡಬೇಕಾದಲ್ಲಿ ನಮ್ಮ ಯೋಜನೆಗಳು ಸುಸ್ಥಿರವಾಗಿರಬೇಕು’ ಎಂದರು.
ಕೇಂದ್ರ ಸರ್ಕಾರ ಈ ಸುಸ್ಥಿರ ಅಭಿವೃದ್ಧಿಗಾಗಿ 24 ರಾಷ್ಟ್ರೀಯ ಯೋಜನೆಗಳನ್ನು ಜಾರಿಗೊಳಿಸಿದೆ. ಸೋಲಾರ್ ಮಿಷನ್, ವಿದ್ಯುತ್ ಚಾಲಿತ ವಾಹನಗಳ ಬಳಕೆ, ಕ್ವಾಂಟಮ್ ಕಂಪ್ಯೂಟಿಂಗ್ ಹೀಗೆ ಹಲವು ಯೋಜನೆಗಳಿವೆ. ಇವುಗಳ ಸಮರ್ಪಕ ಅನುಷ್ಠಾನದಿಂದ ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರೊ. ಅಶೋಕ್ ಎಂ.ರಾಯಚೂರು ಮಾತನಾಡಿ, ‘ಬೂಟಿನಿಂದ ಬಟ್ಟೆ ಉತ್ಪಾದನೆವರೆಗೆ ಎಲ್ಲ ಕಡೆ ಸಾಮಗ್ರಿಗಳ ಅವಶ್ಯ ಇದೆ. ನಾವು ನವೀಕರಿಸಬಹುದಾದ ವಸ್ತುಗಳ ಬಳಕೆ ಬಗ್ಗೆ ಹೆಚ್ಚು ಆಲೋಚಿಸಬೇಕು’ ಎಂದರು.
‘ಈ ವಿಚಾರ ಸಂಕಿರಣದಲ್ಲಿ ಮಂಡಿಸಲು 160 ಪ್ರಬಂಧಗಳು ಬಂದಿದ್ದವು. ನಾವು ಪರಿಶೀಲನೆ ಮಾಡಿ 130 ಪ್ರಬಂಧಗಳನ್ನು ಆಯ್ಕೆ ಮಾಡಿದ್ದೇವೆ. ಸೌರಶಕ್ತಿ, ಪವನ ವಿದ್ಯುತ್ ಹೆಚ್ಚು ಬಳಕೆ ಮಾಡಬೇಕು. ವಿದ್ಯಾರ್ಥಿಗಳು ಆವಿಷ್ಕಾರ, ತಂತ್ರಜ್ಞಾನದ ಕಡೆಗೆ ಗಮನ ನೀಡಬೇಕು. ಮಾನವೀಯತೆ ರೂಢಿಸಿಕೊಳ್ಳಬೇಕು’ ಎಂದು ಗೋಕುಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಂ.ಆರ್. ಸೀತಾರಾಂ ಮಾಹಿತಿ ನೀಡಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಎಚ್.ವಿ. ಪಾರ್ಶ್ವನಾಥ್, ಶೈಕ್ಷಣಿಕ ಸಲಹೆಗಾರ ಕರಸಿದ್ದಪ್ಪ, ಪ್ರಾಂಶುಪಾಲರಾದ ಎನ್.ವಿ.ಆರ್.ನಾಯ್ಡು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.