ಬೆಂಗಳೂರು: ‘ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಇದೇ ರೀತಿ ಮುಂದುವರೆದರೆ ಮಾನವ ಸಂಕುಲಕ್ಕೆ ಉಳಿಗಾಲವಿಲ್ಲ’ ಎಂದು ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ ಎಚ್ಚರಿಸಿದರು.
ಜನ ಪ್ರಕಾಶನ, ಬೆಂಗಳೂರು ವಿಜ್ಞಾನ ವೇದಿಕೆ ಹಾಗೂ ಬೆಂಗಳೂರು ಸಮಾಜ ವಿಜ್ಞಾನ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರೂಪ ಹಾಸನ ಅವರ ‘ಭೂಮ್ತಾಯಿಯ ಕಕ್ಷೆಯಲ್ಲಿ ಪಕ್ಷಿಯಾಗಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಭೂಮಿ ಮತ್ತು ಹೆಣ್ಣು ಮಕ್ಕಳ ಮೇಲೆ ಎಲ್ಲಿಯವರೆಗೂ ಶೋಷಣೆ ಮಾಡುತ್ತೀರಾ? ಅವರ ಗೋಳು ತಪ್ಪಿಸಿ. ಉತ್ತರ ಪ್ರದೇಶದ ಅಮೇಠಿಯಲ್ಲಿ ಮಹಿಳೆಯೊಬ್ಬರು ತನ್ನನ್ನು ಚುಡಾಯಿಸಿದ್ದಾರೆ ಎಂದು ಆರೋಪಿಸಿದ್ದಕ್ಕೆ ಅವರನ್ನು ಸೇರಿಸಿ, ಕುಟುಂಬದ ಸದಸ್ಯರನ್ನೆಲ್ಲ ಗುಂಡಿಕ್ಕಿ ಹತ್ಯೆ ಮಾಡುತ್ತಾರೆ ಎಂದರೆ, ನಾವೆಲ್ಲ ಯಾವ ಲೋಕದಲ್ಲಿದ್ದೇವೆ ಎಂಬುದನ್ನು ಯೋಚಿಸಬೇಕು’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಮರಗಳನ್ನು ಕಡಿದು ಹಾಕಲಾಯಿತು. ಯುವ ಜನರು ಪರಿಸರ ರಕ್ಷಣೆಗೆ ಮುಂದಾಗಬೇಕು. ಮಕ್ಕಳಿಗೆ ಸಾಧಕ ವಿಜ್ಞಾನಿಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪಾ, ‘ಪುಸ್ತಕದಲ್ಲಿ ಜಲ ಸರಂಕ್ಷಣೆ, ಪರಿಸರ ರಕ್ಷಣೆ ಕುರಿತ ಮಾಹಿತಿ ನೀಡಲಾಗಿದೆ. ಮಳೆ ಬರಬೇಕಾದಾಗ ಬರುತ್ತಿಲ್ಲ. ಯಾವ ಕಾಲಕ್ಕೆ ಏನು ಆಗಬೇಕೋ ಅದು ಆಗುತ್ತಿಲ್ಲ. ಕಾರ್ಖಾನೆಗಳ ಕಲುಷಿತ ನೀರನ್ನು ನದಿ, ಕೆರೆಗಳಿಗೆ ಬಿಡುತ್ತಿರುವುದರಿಂದ ಜಲಚರಗಳು ಸಾಯುತ್ತಿವೆ. ಈ ನೀರನ್ನು ಕುಡಿದ ಮನುಷ್ಯನ ಆರೋಗ್ಯವೂ ಹದಗೆಡುತ್ತಿದೆ’ ಎಂದರು.
ಕೃತಿ ಕುರಿತು ಲೇಖಕಿ ವಿ.ಗಾಯತ್ರಿ ಮಾತನಾಡಿದರು. ಬೆಂಗಳೂರು ವಿಜ್ಞಾನ ವೇದಿಕೆ ಕಾರ್ಯದರ್ಶಿ ಎಂ. ಸುಚರಿತ ಚಂದ್ರ, ಬೆಂಗಳೂರು ಸಮಾಜ ವಿಜ್ಞಾನ ವೇದಿಕೆ ಕಾರ್ಯದರ್ಶಿ ಪಿ.ಎಸ್.ಪ್ರತಿಮಾ, ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥ ಶಿವಣ್ಣ ಪಾಲ್ಗೊಂಡಿದ್ದರು.
ಅತ್ಯಂತ ದಾರುಣ ಸ್ಥಿತಿ ಅನುಭವಿಸುತ್ತಿರುವ ಪ್ರಕೃತಿ ಮತ್ತು ಮಹಿಳೆಯ ಗಾಢ ಮೌನದ ಧ್ವನಿಯನ್ನು ಆಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಸರ್ಕಾರ ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದರೆ ಬದಲಾವಣೆ ಸಾಧ್ಯ.–ರೂಪ ಹಾಸನ, ಲೇಖಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.