ಬೆಂಗಳೂರು: "ಸಹೋದರಿಗೆ ತಂದೆಯ ಆಸ್ತಿ ಮೇಲೆ ಸಮಾನ ಹಕ್ಕು ಇಲ್ಲ ಮತ್ತು ಆಕೆಗೆ ಆಸ್ತಿಯಲ್ಲಿ ಪಾಲು ಕೊಡಲಾಗದು" ಎಂಬ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, "ತಂದೆಯ ಆಸ್ತಿಯಲ್ಲಿ ಪುತ್ರನ ಜೊತೆಗೆ ಪುತ್ರಿಗೂ ಸಮಾನ ಪಾಲಿದೆ" ಎಂದು ಆದೇಶಿಸಿದೆ.
ತುಮಕೂರಿನ ಯಲ್ಲಾಪುರದ ವೆಂಕಟೇಶ ಮತ್ತು ಅವರ ತಾಯಿ ವೆಂಕಟಲಕ್ಷ್ಮಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
"ವಿನೀತಾ ಶರ್ಮಾ ಪ್ರಕರಣದಲ್ಲಿ ತಂದೆಯ ಆಸ್ತಿಯಲ್ಲಿ ಪುತ್ರನಿಗೆ ಸರಿಸಮನಾದ ಪಾಲು ಪಡೆಯಲು ಪುತ್ರಿ ಸಹಾ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹಾಗಾಗಿ, ಈ ಪ್ರಕರಣದಲ್ಲಿ ಮೇಲ್ಮನವಿದಾರ ವೆಂಕಟೇಶ್ ಅವರ ಸೋದರತ್ತೆಯಾದ ಲಕ್ಷ್ಮಿದೇವಮ್ಮ ಕೂಡಾ ಅವರ ತಂದೆಯ ಆಸ್ತಿಯಲ್ಲಿ ಪಾಲು ಹೊಂದಲು (ಸಹೋದರ ಗೋವಿಂದಯ್ಯಗೆ ಸರಿಸಮಾನವಾಗಿ) ಅರ್ಹರಾಗಿದ್ದಾರೆ" ಎಂದು ನ್ಯಾಯಪೀಠ ಹೇಳಿದೆ.
"ತಂದೆಯ ಸಾಲ ತೀರಿಸಿದ ಕೂಡಲೇ ವ್ಯಾಜ್ಯಕ್ಕೆ ಸಂಬಂಧಿಸಿದ ಜಮೀನಿನ ಮೇಲೆ ವೈಯಕ್ತಿಕ ಹಕ್ಕು ಸೃಷ್ಟಿಸಿದಂತಾಗುವುದಿಲ್ಲ. ಇನ್ನೂ ವಿವಾದಿತ ಜಮೀನು ಗೋವಿಂದಯ್ಯ ಅವರ ಸ್ವಯಾರ್ಜಿತ ಎಂಬುದನ್ನು ಸಾಬೀತುಪಡಿಸುವಲ್ಲಿ ಮೇಲ್ಮನವಿದಾರರು ವಿಫಲವಾಗಿದ್ದಾರೆ ಎಂಬ ಅಭಿಪ್ರಾಯದೊಂದಿಗೆ, ಕಲಗಿರಿಯಪ್ಪ ಆಸ್ತಿಯಲ್ಲಿ ಲಕ್ಷ್ಮೀ ದೇವಮ್ಮ ಅವರಿಗೆ ಪಾಲಿದೆ" ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.