ADVERTISEMENT

ಹಲವರಿಂದ ಸಮಾನತೆ: ಹಂಸಲೇಖ

ಪಂಡಿತ್‌ ರಾಜೀವ್‌ ತಾರಾನಾಥರ 92ನೇ ಜನ್ಮದಿನದ ಸಮಾರಂಭ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 0:15 IST
Last Updated 20 ಅಕ್ಟೋಬರ್ 2024, 0:15 IST
ಪಂಡಿತ್ ರಾಜೀವ್ ತಾರನಾಥ ಅವರ ಭಾವಚಿತ್ರಕ್ಕೆ ಮೆಮೊರಿಯಲ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಕೃಷ್ಣ ಮನವಲ್ಲಿ, ಲೇಖಕಿ ಸರ್ವಮಂಗಳ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌, ಲೇಖಕ ಬೊಳುವಾರು ಮಹಮ್ಮದ್‌ ಕುಂಞಿ, ಲೇಖಕಿ ವಿಜಯಮ್ಮ, ಸಂಗೀತ ನಿರ್ದೇಶಕ ಹಂಸಲೇಖ ಅವರು ಪುಷ್ಪನಮನ ಸಲ್ಲಿಸಿದರು.                 ಪ್ರಜಾವಾಣಿ ಚಿತ್ರ
ಪಂಡಿತ್ ರಾಜೀವ್ ತಾರನಾಥ ಅವರ ಭಾವಚಿತ್ರಕ್ಕೆ ಮೆಮೊರಿಯಲ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಕೃಷ್ಣ ಮನವಲ್ಲಿ, ಲೇಖಕಿ ಸರ್ವಮಂಗಳ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌, ಲೇಖಕ ಬೊಳುವಾರು ಮಹಮ್ಮದ್‌ ಕುಂಞಿ, ಲೇಖಕಿ ವಿಜಯಮ್ಮ, ಸಂಗೀತ ನಿರ್ದೇಶಕ ಹಂಸಲೇಖ ಅವರು ಪುಷ್ಪನಮನ ಸಲ್ಲಿಸಿದರು.                 ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ಮಣ್ಣಿನಲ್ಲಿ ಅಹಿಂಸೆಯ ಬೀಜ ಯಾರಿಂದ ಬಿತ್ತನೆ ಆಗಿದೆಯೊ ಗೊತ್ತಿಲ್ಲ. ಆದರೆ, ಸಮಾನತೆಯನ್ನು ಸಾರಿದವರು ಹಲವರಿದ್ದಾರೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಪಂಡಿತ್‌ ರಾಜೀವ್‌ ತಾರಾನಾಥ ಮೆಮೊರಿಯಲ್‌ ಟ್ರಸ್ಟ್‌ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಪಂಡಿತ್‌ ರಾಜೀವ್‌ ತಾರಾನಾಥರ 92ನೇ ಜನ್ಮದಿನದ ಸಮಾರಂಭ’ದಲ್ಲಿ ಅವರು ಮಾತನಾಡಿದರು.

‘ರಾಜೀವ್‌ ತಾರಾನಾಥ ಅವರು ಸಂಗೀತ ಕ್ಷೇತ್ರದಲ್ಲಿದ್ದು ಬಹುತ್ವದ ಧ್ವನಿಯಾಗಿ ತಮ್ಮ ಧ್ವನಿಯನ್ನು ದಕ್ಕಿಸಿಕೊಂಡವರು. ಸಂಗೀತ ಕ್ಷೇತ್ರದ ದಿಗ್ಗಜರಾಗಿ ಬಹುತ್ವ, ಸಮನ್ವಯತೆಯ ದನಿಯಾದ ತಾರಾನಾಥರ ಸಾಮಾಜಿಕ ಚಿಂತನೆ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ರಾಜೀವ್ ತಾರಾನಾಥ ಸ್ಮರಣಾರ್ಥ ಸ್ಥಾಪಿಸಿರುವ ಟ್ರಸ್ಟ್‌ನಿಂದ ಅವರ ಆಶಯಗಳನ್ನು ಎತ್ತಿ ಹಿಡಿಯುವ, ಜತೆಗೆ  ಮುಂದಿನ ಪೀಳಿಗೆಗೆ ಅವರ ಸಂಗೀತ ಲಭ್ಯವಾಗುವಂತೆ ಮಾಡಬೇಕು. ಸಂಗೀತ ಮಾಧ್ಯಮದ ಮೂಲಕ ಅವರ ಚಿಂತನೆಗಳನ್ನು ಪಸರಿಸಬೇಕು ಎಂದರು.

‘ಹೊಸ ಪೀಳಿಗೆಯವರು ಕನ್ನಡದ ಓದಿನಿಂದ ದೂರವಾಗುತ್ತಿದ್ದಾರೆ. ಇದರಿಂದ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಹೊಸಬರು ಬರುತ್ತಿಲ್ಲ’ ಎಂದು ಲೇಖಕ ಬೊಳುವಾರು ಮಹಮದ್‌ ಕುಂಞಿ ಆತಂಕ ವ್ಯಕ್ತಪಡಿಸಿದರು.

ತಾರಾನಾಥ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಮೊಹಮದ್‌, ‘ತಬಲಾ, ಇಂಗ್ಲಿಷ್‌ ಸಾಹಿತ್ಯದ ಅಧ್ಯಯನ, ಸರೋದ್‌ ಕ್ಷೇತ್ರಗಳ ಬಹುಮುಖ ಪ್ರತಿಭೆಯಾಗಿದ್ದವರು ತಾರಾನಾಥ್. ದೊಡ್ಡ ಶಿಷ್ಯ ಪರಂಪರೆಯನ್ನು ಬೆಳೆಸಿದ ಕೀರ್ತಿಯೂ ಅವರದ್ದು’ ಎಂದರು.

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಲೇಖಕಿ ಸರ್ವಮಂಗಳ ಮಾತನಾಡಿದರು. ವೆಂಕಟೇಶ್‌ ಕುಮಾರ್‌, ಕೇಶವ ಜೋಶಿ, ಪಂಚಾಕ್ಷರಿ ಹಿರೇಮಠ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.