ಬೆಂಗಳೂರು: ನಕಲಿ ಕಂಪನಿಗಳನ್ನು ಸೃಷ್ಟಿಸಿ ಇ–ಪೆಹಚಾನ್ ಕಾರ್ಡ್‌ಗಳನ್ನು(ಇ.ಎಸ್.ಐ) ಮಾಡಿಸಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜಾಜಿನಗರದ ಪ್ರಕಾಶ್ ನಗರದ ನಿವಾಸಿ ಶ್ರೀಧರ್(35), ರಮೇಶ್(36) ಮತ್ತು ಶಿವಲಿಂಗ(30) ಹಾಗೂ ಚಂದ್ರಕುಮಾರ್(30) ಬಂಧಿತರು.
ಬಂಧಿತರಿಂದ ನಾಲ್ಕು ಲ್ಯಾಪ್‌ಟಾಟ್, 90 ಮೊಹರುಗಳು, 10 ಮೊಬೈಲ್ ಫೋನ್, ಎರಡು ಬ್ಯಾಂಕ್ ಪಾಸ್‌ಬುಕ್, ಒಂದು ನೋಟ್‌ಬುಕ್, ₹59 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಶ್ವೇತಾ ಮತ್ತು ಶಶಿಕಲಾ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ನಕಲಿ ಕಂಪನಿಗಳನ್ನು ಸೃಷ್ಟಿಸಿ, ಆ ಕಂಪನಿಗಳ ಮೂಲಕ ಫಲಾನುಭವಿಗಳಲ್ಲದ ಜನರಿಗೆ ಇ–ಪೆಹಚಾನ್ ಕಾರ್ಡ್ ಮಾಡಿಸಿ ಇಎಸ್‌ಐ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದರು. ಕಾರ್ಮಿಕರಲ್ಲದ ಸುಮಾರು 869 ಮಂದಿಗೆ ಈ ಕಾರ್ಡ್ ವಿತರಿಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಕಾರ್ಡ್ ಪಡೆದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
‘ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಶ್ರೀಧರ್ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ಅದೇ ಆಸ್ಪತ್ರೆ ಆವರಣದಲ್ಲಿ ರಮೇಶ್ ಕ್ಯಾಂಟೀನ್ ನಡೆಸುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಶಿವಲಿಂಗ ಅವರು ಸ್ವಚ್ಛತಾ ಕೆಲಸ ಮಾಡುತ್ತಿದ್ದರೆ, ಚಂದ್ರಕುಮಾರ್ ಬೇರೆ ಕಡೆ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಕರಣದ ಪ್ರಮುಖ ಆರೋಪಿ ಆಗಿರುವ ರಮೇಶ್, ತನ್ನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವವರಿಗೆ ಹಾಗೂ ಕುಟುಂಬಸ್ಥರಿಗೆ ಇ.ಎಸ್.ಐ ಕಾರ್ಡ್ ಮಾಡಿಸಿಕೊಟ್ಟಿದ್ದರು. ಬೇರೆಯವರಿಗೂ ಇದೇ ಮಾದರಿಯಲ್ಲಿ ಕಾರ್ಡ್ ಮಾಡಿಸಿಕೊಟ್ಟರೆ, ಕಮಿಷನ್ ದೊರೆಯಲಿದೆ ಎಂಬ ಆಸೆಯಿಂದ ಶ್ರೀಧರ್ ಜತೆಗೂಡಿ ಸಂಚು ರೂಪಿಸಿದ್ದರು. ಗ್ಯಾಸ್ ಏಜೆನ್ಸಿಯೊಂದರ ಉದ್ಯೋಗಿ ಶ್ವೇತಾ ಮತ್ತು ಖಾಸಗಿ ಕಂಪನಿಯ ಕಂಪ್ಯೂಟರ್ ಆಪರೇಟರ್ ಶಶಿಕಲಾ ಅವರಿಗೂ ಮಾಹಿತಿ ನೀಡಿ, ದಂಧೆ ಆರಂಭಿಸಿದ್ದರು. ಇತ್ತೀಚೆಗೆ ಈ ರೀತಿ ಕಾರ್ಡ್ ಪಡೆದ ವ್ಯಕ್ತಿಯೊಬ್ಬ ಹೆಚ್ಚುವರಿ ಹಣ ಪಡೆದ ಕುರಿತು ಸಿಸಿಬಿಗೆ ದೂರು ನೀಡಿದ್ದರು. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಆರೋಪಿಗಳು ಆರು ನಕಲಿ ಕಂಪನಿ ಸೃಷ್ಟಿಸಿಕೊಂಡಿದ್ದರು. ಆ ಕಂಪನಿಗಳ ನೌಕರರೆಂದು ನಕಲಿ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಅವರಿಂದ ₹20 ಸಾವಿರ ಪಡೆದು ಕಾರ್ಮಿಕರಲ್ಲದವರಿಗೂ ಇಎಸ್‌ಐ ಕಾರ್ಡ್ ನೀಡಲಾಗುತ್ತಿತ್ತು. ಪ್ರತಿ ತಿಂಗಳು ಕಾರ್ಡ್ ಪಡೆದವರಿಂದ ₹500 ಪಡೆದು, ನಿಯಮದಂತೆ ಸರ್ಕಾರಕ್ಕೆ ₹280 ಪಾವತಿಸಿ, ಬಾಕಿ ₹220 ಅನ್ನು ಆರೋಪಿಗಳೇ ಇಟ್ಟುಕೊಳ್ಳುತ್ತಿದ್ದರು ಎಂದು ತನಿಖಾಧಿಕಾರಿಗಳು ಹೇಳಿದರು.
ಸಿಸಿಬಿಯ ಸಂಘಟಿತ ಅಪರಾಧ ವಿಭಾಗದ ಎಸಿಪಿ ವಿ.ಗೋವಿಂದರಾಜುಮ, ಇನ್‌ಸ್ಪೆಕ್ಟರ್ ದೇವೇಂದ್ರಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.