ಬೆಂಗಳೂರು: ಕಾರ್ಮಿಕರ ರಾಜ್ಯ ವಿಮಾ ಯೋಜನೆಗೆ (ಇಎಸ್‌ಐ) ನಿಗದಿಪಡಿಸಿರುವ ವೇತನ ಮಿತಿಯನ್ನು ₹50 ಸಾವಿರಕ್ಕೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ವರ್ಕರ್ಸ್ ಯೂನಿಯನ್ ಸದಸ್ಯರು ಗುರುವಾರ ಮೈಸೂರು ರಸ್ತೆಯಲ್ಲಿರುವ ಇಎಸ್‌ಐ ಪ್ರಾಂತೀಯ ನಿರ್ದೇಶಕರ ಕಚೇರಿ ಮುಂಭಾದಲ್ಲಿ ಪ್ರತಿಭಟನೆ ನಡೆಸಿದರು.
‘ಇಎಸ್‌ಐ ಕಾಯ್ದೆಯ ಅಡಿಯಲ್ಲಿ ಕಾರ್ಮಿಕರು ಆರೋಗ್ಯ ಸೌಲಭ್ಯ ಪಡೆದುಕೊಳ್ಳಲು ₹21 ಸಾವಿರ ವೇತನ ನಿಗದಿಪಡಿಸಲಾಗಿದೆ. ಆದರೆ, ಬಹುತೇಕ ಕಾರ್ಮಿಕರ ವೇತನ ಹೆಚ್ಚಾಗಿದ್ದು, ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹರಾಗಿಲ್ಲ. ಆದ್ದರಿಂದ ಈ ಮಿತಿಯನ್ನು ₹ 51 ಸಾವಿರಕ್ಕೆ ನಿಗದಿಪಡಿಸಬೇಕು’ ಎಂದು ಯೂನಿಯನ್ ಅಧ್ಯಕ್ಷ ಗಣಪತಿ ಹೆಗಡೆ ಒತ್ತಾಯಿಸಿದರು.
‘ಸದ್ಯ ಇಎಸ್‌ಐ ಸೌಲಭ್ಯ ಪಡೆದುಕೊಳ್ಳಲು ಮಿತಿ ಇರುವ ಕಾರಣ ಬಹುತೇಕ ಕಾರ್ಮಿಕರು ಖಾಸಗಿ ಆರೋಗ್ಯ ವಿಮಾ ಕಂಪನಿಗಳಲ್ಲಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಆರೋಗ್ಯ ವಿಮೆ ನೀತಿಯಲ್ಲಿ ಸೂಚಿಸಿದ ಆಸ್ಪತ್ರೆಗಳಲ್ಲಿ ನಿಗದಿತ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಕಾರ್ಮಿಕರ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ನೀಡಲು ಅವಕಾಶವಿಲ್ಲ’ ಎಂದು ದೂರಿದರು.
‘ಈ ಖಾಸಗಿ ಆರೋಗ್ಯ ವಿಮಾ ಕಂಪನಿಗಳು ಖಾಸಗಿ ಆಸ್ಪತ್ರೆಯ ಮಾಲೀಕರೊಂದಿಗೆ ಶಾಮೀಲಾಗಿದ್ದು, ಕಾಯಿಲೆಗಳ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ದರ ವಿಧಿಸುತ್ತಿವೆ. ಆರೋಗ್ಯ ವಿಮೆ ಯೋಜನೆಯ ಮೂಲಕ ಕಾರ್ಮಿಕರನ್ನು ಕೊಳ್ಳೆ ಹೊಡೆಯುವ ಕೇಂದ್ರ ಸರ್ಕಾರದ ನೀತಿಯನ್ನು ಎಲ್ಲರೂ ಖಂಡಿಸಬೇಕು. ಎಲ್ಲ ವರ್ಗದ ಕಾರ್ಮಿಕರು ಇಎಸ್‌ಐ ಸೌಲಭ್ಯ ಪಡೆದುಕೊಳ್ಳಲು ವೇತನ ಮಿತಿಯನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.