ADVERTISEMENT

ರಾಜ್ಯದಲ್ಲಿ ಇನ್ನೂ 1,190 ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 4:23 IST
Last Updated 4 ಮಾರ್ಚ್ 2024, 4:23 IST
ಬೆಸ್ಕಾಂ ಸ್ಥಾಪಿಸಿರುವ ಚಾರ್ಜಿಂಗ್‌ ಸ್ಟೇಷನ್‌.
ಬೆಸ್ಕಾಂ ಸ್ಥಾಪಿಸಿರುವ ಚಾರ್ಜಿಂಗ್‌ ಸ್ಟೇಷನ್‌.   

ಬೆಂಗಳೂರು: ವಿದ್ಯುತ್‌ ಚಾಲಿತ ವಾಹನಗಳಿಗೆ ರಾಜ್ಯದಲ್ಲಿ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ 31 ಜಿಲ್ಲೆಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ ಮಾದರಿ) ಹೊಸದಾಗಿ 1,190 ಚಾರ್ಜಿಂಗ್‌ ಸ್ಟೇಷನ್‌ (ಸಿ.ಎಸ್‌) ಸ್ಥಾಪಿಸಲು ಎಸ್ಕಾಂಗಳು ಮುಂದಾಗಿವೆ.

ಹೊಸ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳ ಸ್ಥಾಪನೆಯಿಂದ ರಾಜ್ಯದಲ್ಲಿ ಪರಿಸರ ಸ್ನೇಹಿ ವಾಹನಗಳ ಸಂಖ್ಯೆಯೂ ಹೆಚ್ಚಲಿದೆ. ರಾಜ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ಕೇವಲ 9 ಸಾವಿರ ವಿದ್ಯುತ್ ಚಾಲಿತ ವಾಹನಗಳಿದ್ದವು. ಈಗ ಇವಿ ಸಂಖ್ಯೆ 3.31 ಲಕ್ಷಕ್ಕೆ ತಲುಪಿದೆ.

ಇಂಧನ ದಕ್ಷತೆ ಮಂಡಳಿ (ಬಿಇಇ) ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಎಸ್ಕಾಂಗಳು, ಖಾಸಗಿ ಹಾಗೂ ಸರ್ಕಾರೇತರ ಸಂಸ್ಥೆಗಳ ಅಡಿಯಲ್ಲಿ ಸದ್ಯ 5,059 ಇವಿ ಚಾರ್ಜಿಂಗ್‌ ಸ್ಟೇಷನ್‌ ಕಾರ್ಯಾಚರಿಸುತ್ತಿದ್ದು, ಇ.ವಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಯಲ್ಲಿ ದೇಶಕ್ಕೆ ರಾಜ್ಯವೇ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ದೆಹಲಿ, ಕೇರಳ, ತಮಿಳುನಾಡು, ಉತ್ತರಪ್ರದೇಶ ಹಾಗೂ ರಾಜಸ್ಥಾನಗಳಿವೆ.

ADVERTISEMENT

ಐದು ವರ್ಷಗಳ ಹಿಂದೆ ಬೆಸ್ಕಾಂ ಇ.ವಿ ಚಾರ್ಜಿಂಗ್‌ ಸ್ಟೇಷನ್‌ಗಳ ಸ್ಥಾಪನೆಗೆ ಮುಂದಾಗಿದ್ದ ವೇಳೆ ನಿರೀಕ್ಷಿತ ಸ್ಪಂದನೆ ದೊರೆತಿರಲಿಲ್ಲ. ಈಗ ಸಿ.ಎಸ್‌ಗೆ ಬೇಡಿಕೆ ಹೆಚ್ಚುತ್ತಿದೆ.

‘ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸದ್ಯ 195 ಸ್ಟೇಷನ್‌ಗಳಿದ್ದು, 320 ಚಾರ್ಜಿಂಗ್‌ ಪಾಯಿಂಟ್‌ಗಳಿವೆ. ರಾಜ್ಯದ ವಿವಿಧ ಎಸ್ಕಾಂಗಳಲ್ಲಿ ಒಟ್ಟು 265 ಸಿಎಸ್‌ಗಳಿದ್ದು, 394 ಚಾರ್ಜಿಂಗ್‌ ಪಾಯಿಂಟ್‌ಗಳಿವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಹೆದ್ದಾರಿ ಪಕ್ಕದಲ್ಲಿ 140 ಸ್ಟೇಷನ್‌: 

ರಸ್ತೆಗೆ ಇಳಿಯುತ್ತಿರುವ ವಿದ್ಯುತ್‌ ಚಾಲಿತ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಬೆಸ್ಕಾಂ ಚಾರ್ಜಿಂಗ್‌ ಸ್ಟೇಷನ್‌ಗಳ ಸಂಖ್ಯೆಯನ್ನೂ ಹೆಚ್ಚಿಸುತ್ತಿದೆ. ಹೆದ್ದಾರಿಗಳ ಪಕ್ಕದಲ್ಲಿ ಸಿ.ಎಸ್‌ ಸ್ಥಾಪಿಸುವಂತೆ ವಾಹನಗಳ ಚಾಲಕರಿಂದ ಬೇಡಿಕೆ ಬಂದಿತ್ತು. ಬೆಸ್ಕಾಂನ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯ ಪಕ್ಕದಲ್ಲಿ 140  ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪನೆ ಕೆಲಸಗಳು ನಡೆಯುತ್ತಿವೆ. ಉಳಿದ ಕೇಂದ್ರಗಳ ಕೆಲಸವನ್ನು ಸದ್ಯದಲ್ಲೇ ಆರಂಭಿಸಲಾಗುವುದು’ ಎಂದು ಬೆಸ್ಕಾಂನ ಇವಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇ.ವಿ ಮಾಲೀಕರ ಅಗತ್ಯಕ್ಕೆ ತಕ್ಕಂತೆ ಎಸ್ಕಾಂನಿಂದ ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪಿಸಲಾಗುತ್ತಿದೆ. ಪಿಪಿಪಿ ಮಾದರಿಯಲ್ಲಿ 1,190 ಸ್ಟೇಷನ್‌ಗಳ ಪೈಕಿ 530 ಚಾರ್ಜಿಂಗ್‌ ಸ್ಟೇಷನ್‌ ಕಾಮಗಾರಿ ಆರಂಭಿಸಲು ಸಿದ್ದತೆಗಳು ನಡೆದಿವೆ. ಉಳಿದ 660 ಸ್ಟೇಷನ್‌ಗಳ ಕೆಲಸವು ಶೀಘ್ರವೇ ಆರಂಭವಾಗಲಿದೆ. ವೇಗವಾಗಿ ಚಾರ್ಜಿಂಗ್‌ ಪಾಯಿಂಟ್‌ಗಳತ್ತಲೂ ಚಾಲಕರು ಒಲವು ತೋರುತ್ತಿದ್ದು, ವಾಹನ ದಟ್ಟಣೆ ಪ್ರದೇಶದಲ್ಲಿ ವೇಗವಾಗಿ ಇಂತಹ 1,314 ಪಾಯಿಂಟ್‌ಗಳು ಆರಂಭಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.