ADVERTISEMENT

ಪೊಲೀಸರಿಂದ ಕಿರುಕುಳ, ಸುಳ್ಳು ಪ್ರಕರಣ ದಾಖಲು ಆರೋಪ: ದಯಾಮರಣ ಕೋರಿದ ಆಟೊ ಚಾಲಕ

​ಪ್ರಜಾವಾಣಿ ವಾರ್ತೆ
Published 26 ಮೇ 2023, 5:21 IST
Last Updated 26 ಮೇ 2023, 5:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನನ್ನ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ, ಕಿರುಕುಳ ನೀಡಿದ್ದಾರೆ. ಇದರಿಂದ ಜೀವನದಲ್ಲಿ ಜಿಗುಪ್ಸೆಯಾಗಿದ್ದು, ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ’ ಎಂದು ನಗರದ ಆಟೊ ಚಾಲಕರೊಬ್ಬರು ಪೊಲೀಸ್ ಕಮಿಷನರ್ ಅವರಿಗೆ ಟ್ವೀಟ್ ಮಾಡಿದ್ದಾರೆ.

‘ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದ ಆರೋಪದಡಿ ನನ್ನ ಹಾಗೂ ತಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸುಳ್ಳು ಪ್ರಕರಣವೆಂಬುದಕ್ಕೆ ಪುರಾವೆ ನೀಡಿದರೂ ಪೊಲೀಸರು ಸ್ಪಂದಿಸಿಲ್ಲ. ನಮ್ಮನ್ನು ಬಂಧಿಸಿದ್ದರು. ಬಡ್ಡಿಗೆ ಹಣ ತಂದು ಜಾಮೀನು ಪಡೆದುಕೊಂಡಿದ್ದೇವೆ’ ಎಂದೂ ಚಾಲಕ ಹೇಳಿದ್ದಾರೆ.

‘ಸುಳ್ಳು ಪ್ರಕರಣ ದಾಖಲಿಸಿ ನಮಗೆ ತೊಂದರೆ ನೀಡಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ನನಗೆ ದಯಾಮರಣ ಕೊಡಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ADVERTISEMENT

ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಮಿಷನರ್ ಕಚೇರಿ ಸಿಬ್ಬಂದಿ, ‘ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ವರ್ಗಾಯಿಸಲಾಗಿದೆ’ ಎಂದಿದ್ದಾರೆ.

ಪೊಲೀಸರ ಬೆದರಿಕೆಯಿಂದ ಸಾವು ಆರೋಪ: ಸಿಐಡಿ ತನಿಖೆ

ಬೆಂಗಳೂರು: ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹುಸೇನ್ (31) ಎಂಬುವವರು ಮೃತಪಟ್ಟ ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ. 

‘ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾದ ಆರೋಪದಡಿ ವಿಚಾರಣೆ ನಡೆಸಲೆಂದು ಪೊಲೀಸರ ತಂಡ ಬುಧವಾರ ರಾತ್ರಿ ಹುಸೇನ್‌ ಬಳಿ ಹೋಗಿತ್ತು. ಇದೇ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಹುಸೇನ್, ಮಹಡಿಯಿಂದ ಜಿಗಿಯುವ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪೊಲೀಸರ ಹಲ್ಲೆ ಹಾಗೂ ಬೆದರಿಕೆಯಿಂದ ಹುಸೇನ್ ಮೃತಪಟ್ಟಿದ್ದಾ ರೆಂದು ಆರೋಪಿಸಿ ಸಂಬಂಧಿಕರು ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ ಆಗಿದೆ. ಅದಕ್ಕೆ ಬೇಕಾದ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ’ ಎಂದು ತಿಳಿಸಿವೆ.

ಸಿಐಡಿ ಅಧಿಕಾರಿಗಳ ತಂಡ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ. ಘಟನಾ ಸ್ಥಳಕ್ಕೂ ಹೋಗಿ ಪರಿಶೀಲನೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.