ADVERTISEMENT

ಇವಿ ಬ್ಯಾಟರಿಗಳ ಸ್ಫೋಟಕ್ಕೆ ಕಾರಣ ಪತ್ತೆ!

ಹೊಸ ತಲೆಮಾರಿನ ಹೆಚ್ಚು ಕ್ಷಮತೆಯ ಬ್ಯಾಟರಿ ಅಭಿವೃದ್ಧಿ l ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 19:32 IST
Last Updated 3 ಜೂನ್ 2022, 19:32 IST
ಭಾರತೀಯ ವಿಜ್ಞಾನ ಸಂಸ್ಥೆಯ ಬ್ಯಾಟರಿ ಪರೀಕ್ಷೆ ಸೌಲಭ್ಯ
ಭಾರತೀಯ ವಿಜ್ಞಾನ ಸಂಸ್ಥೆಯ ಬ್ಯಾಟರಿ ಪರೀಕ್ಷೆ ಸೌಲಭ್ಯ   

ಬೆಂಗಳೂರು: ವಿದ್ಯುತ್‌ ಚಾಲಿತ ವಾಹನಗಳಲ್ಲಿನ ಬ್ಯಾಟರಿಗಳು ಸ್ಫೋಟಗೊಂಡು ಬೆಂಕಿ ಹೊತ್ತಿಕೊಳ್ಳುವುದರ ಕಾರಣವನ್ನು ಪತ್ತೆ ಮಾಡಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು ಅದಕ್ಕೆ ಪರಿಹಾರವನ್ನೂ ಮುಂದಿಟ್ಟಿದ್ದಾರೆ.

ವಿದ್ಯುತ್‌ ಚಾಲಿತ ವಾಹನಗಳಲ್ಲಿ ಬಳಸುವ ಲಿಥಿಯಂ ಬ್ಯಾಟರಿಗಳ ಬದಲಿಗೆ ಹೊಸ ತಲೆಮಾರಿನ ಘನಸ್ಥಿತಿ (ಸಾಲಿಡ್‌– ಸ್ಟೇಟ್‌) ಬ್ಯಾಟರಿ ತಂತ್ರಜ್ಞಾನವನ್ನು ಆವಿಷ್ಕರಿಸಿದೆ. ಹೊಸ ಬ್ಯಾಟರಿ ಬೇಗನೆ ವೈಫಲ್ಯಕ್ಕೆ ತುತ್ತಾಗುವುದಿಲ್ಲ. ಸುದೀರ್ಘ ಬಾಳಿಕೆ ಮತ್ತು ತ್ವರಿತ ಗತಿಯಲ್ಲಿ ಚಾರ್ಜಿಂಗ್‌ ಮಾಡಬಹುದಾದ ಕ್ಷಮತೆ ಹೊಂದಿದೆ.

ವಾಹನಗಳಲ್ಲಿ ಲಿಥಿಯಂ ಅಯಾನ್‌ ಬ್ಯಾಟರಿಗಳನ್ನು ಪದೇ ಪದೇ ಬಳಸುವುದು ಮತ್ತು ಅತಿಯಾಗಿ ಬಳಸುವುದರಿಂದ ತೆಳುವಾದ ಎಳೆಗಳು ಬೆಸೆದುಕೊಳ್ಳುತ್ತವೆ. ಇದನ್ನು ‘ಡೆನ್‌ಡ್ರೈಟ್‌‘ ಎನ್ನಲಾಗುತ್ತದೆ.
ಹರಳುಗಟ್ಟಿದ್ದ ರೆಂಬೆಗಳಂತೆ ಹಬ್ಬಿಕೊಂಡಿರುವ ಇದು ಬ್ಯಾಟರಿಗಳಲ್ಲಿ ಶಾರ್ಟ್‌ ಸರ್ಕೀಟ್‌ಗೆ ಕಾರಣವಾಗುತ್ತದೆ ಮತ್ತು ಬ್ಯಾಟರಿಗಳು ನಿರರ್ಥಕವಾಗುತ್ತವೆ.

ADVERTISEMENT

ಭಾರತೀಯ ವಿಜ್ಞಾನ ಸಂಸ್ಥೆಯ ‘ಸಾಲಿಡ್‌ ಸ್ಟೇಟ್‌ ಅಂಡ್‌ ಸ್ಟ್ರಕ್ಚರಲ್‌ ಕೆಮಿಸ್ಟ್ರಿ ಯುನಿಟ್‌’ ವಿಭಾಗದ ಸಹಾಯಕ ಪ್ರೊಫೆಸರ್‌ ನಾಗ ಫಣಿ ಅಟುಕುರಿ ಮತ್ತು ತಂಡ ಸಿದ್ಧಪಡಿಸಿರುವಅಧ್ಯಯನ ವರದಿ ‘ನೇಚರ್‌ ಮೆಟಿರಿಯಲ್ಸ್‌’ನಲ್ಲಿ ಪ್ರಕಟಗೊಂಡಿದೆ.

ಬ್ಯಾಟರಿಗಳಲ್ಲಿ ‘ಡೆನ್‌ಡ್ರೈಟ್‌’ ರಚನೆಯಾಗಲು ಯಾವುದೇ ಒಂದು ಎಲೆಕ್ಟ್ರೋಡ್‌ನಲ್ಲಿ ಆರಂಭಿಕ ಹಂತದಲ್ಲಿ ಸೂಕ್ಷ್ಮರೂಪದ ನಿರ್ವಾತ ಉಂಟಾಗುವುದೇ ಮೂಲ ಕಾರಣ ಎನ್ನುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ‘ಡೆನ್‌ಡ್ರೈಟ್‌’ ರಚನೆ ಆಗುವುದನ್ನು ಮುಂದೂಡಲು ನಿರ್ದಿಷ್ಟ ಬಗೆಯ ಲೋಹದ ತೆಳುವಾದ ಪದರಗಳನ್ನು ಎಲೆಕ್ಟ್ರೋಲೈಟ್‌ ಮೇಲ್ಭಾಗದಲ್ಲಿ ಹೊದಿಸಿದರೆ ಬ್ಯಾಟರಿಯ ಬಾಳಿಕೆ ಹೆಚ್ಚುತ್ತದೆ ಮತ್ತು ಬ್ಯಾಟರಿ ಚಾರ್ಜಿಂಗ್‌ ಕೂಡ ಬೇಗ ಮಾಡಲು ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ.

ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಸಾಮಾನ್ಯವಾಗಿ ಬಳಸುವ ಲಿಥಿಯಂ ಅಯಾನ್‌ ಬ್ಯಾಟರಿಗಳಲ್ಲಿ ದ್ರವರೂಪದ ಎಲೆಕ್ಟ್ರೋಲೈಟ್ ಅನ್ನು ಕಬ್ಬಿಣ ಮತ್ತು ಕೋಲಾಬ್ಟ್‌ನಿಂದ ಮಾಡಿದ ಕ್ಯಾಥೋಡ್ ಮತ್ತು ಗ್ರಾಫೈಟ್‌ನಿಂದ ಮಾಡಿದ ಅನೋಡ್‌ ಮಧ್ಯೆ ‘ಸ್ಯಾಂಡ್‌ವಿಚ್‌’ನಂತೆ ಅಳವಡಿಸಿರಲಾಗುತ್ತದೆ. ಈ ಬ್ಯಾಟರಿಗಳು ಚಾರ್ಜಿಂಗ್‌ ಮಾಡುವಾಗ ಸಾಧನಗಳು ಅಥವಾ ವಾಹನಗಳಿಗೆ ವಿದ್ಯುತ್‌ ಬಳಕೆಯಾಗುವಾಗ ಲಿಥಿಯಂ ಅಯಾನುಗಳು ಅನೋಡ್ಮತ್ತು ಕ್ಯಾಥೋಡ್‌ ಮಧ್ಯೆ ವಿರುದ್ಧ ದಿಕ್ಕಿನಲ್ಲಿ ಲಾಳಿ ಹೊಡೆಯುತ್ತವೆ. ಇದು ಅಷ್ಟು ಸುರಕ್ಷಿತವಲ್ಲ. ಉಷ್ಣಾಂಶ ಅಧಿಕವಾಗುತ್ತಿದ್ದಂತೆ ದ್ರವರೂಪದ ಎಲೆಕ್ಟ್ರೋಲೈಟ್‌ಗೆ ಬೇಗನೇ ಬೆಂಕಿ ಹಿಡಿಯುತ್ತದೆ.

ಘನ– ಸ್ಥಿತಿಯ ಬ್ಯಾಟರಿಗಳು ಲಿಥಿಯಂಗೆ ಪರ್ಯಾಯ ಮತ್ತು ಉತ್ತಮ ಪರಿಹಾರ ನೀಡುವ ಬ್ಯಾಟರಿಗಳಾಗಿವೆ. ಇಲ್ಲಿ ದ್ರವರೂಪದ ಬದಲಿಗೆ ಘನ ಸೆರಾಮಿಕ್ ಎಲೆಕ್ಟ್ರೋಲೈಟ್‌ ಅಳವಡಿಸಲಾಗುತ್ತದೆ. ಗ್ರಾಫೈಟ್‌ ಬದಲಿಗೆ ಲೋಹದಿಂದ ಮಾಡಿದ ಲಿಥಿಯಂ ಅನ್ನೂ ಬಳಸಲಾಗುತ್ತದೆ. ಸೆರಾಮಿಕ್ ಎಲೆಕ್ಟ್ರೋಲೈಟ್‌ ಅತ್ಯಧಿಕ ಉಷ್ಣಾಂಶದಲ್ಲೂ ಕ್ಷಮತೆಯಿಂದ ಕಾರ್ಯನಿರ್ವಹಿಸಬಲ್ಲದು. ಭಾರತ ದಂತಹ ಉಷ್ಣ ವಲಯದ ದೇಶಗಳಿಗೆ ಹೇಳಿ ಮಾಡಿಸಿದೆ. ಲಿಥಿಯಂ ಕೂಡ ಹಗುರವಾಗಿರುತ್ತದೆ ಮತ್ತು ಗ್ರಾಫೈಟ್‌ಗಿಂತ ಹೆಚ್ಚು ಚಾರ್ಜ್‌ ಅನ್ನು ಸಂಗ್ರಹಿಸಿಕೊಂಡಿರುತ್ತದೆ. ಬ್ಯಾಟರಿ ವೆಚ್ಚದಲ್ಲೂ ಗಣಿನೀಯ ಪ್ರಮಾಣದಲ್ಲಿ
ಇಳಿಕೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.