ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುಂಕದಕಟ್ಟೆ, ಹೆಗ್ಗನಹಳ್ಳಿ, ರಾಜಗೋಪಾಲನಗರ, ನೆಲಗದರನಹಳ್ಳಿ, ಚಿಕ್ಕಸಂದ್ರ, ಎ.ಜಿ.ಬಿ.ಲೇಔಟ್ ಗ್ರಾಮಗಳಲ್ಲಿ ಗುಂಡಿ ಬಿದ್ದ ರಸ್ತೆಗಳು, ಶೆಟ್ಟಿಹಳ್ಳಿ ಗ್ರಾಮದಲ್ಲಿಅರ್ಧಕ್ಕೆ ನಿಂತ ರೈಲ್ವೆ ಕೆಳಸೇತುವೆ ಕಾಮಗಾರಿ ಹಾಗೂ ಗಬ್ಬೆದ್ದು ನಾರುತ್ತಿರುವ ಚಿಕ್ಕಬಾಣಾವರ ಕೆರೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ವೀಕ್ಷಿಸಿದರು.
ಈ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅನಾದರ ತೋರಿರುವ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ದೇವೇಗೌಡರು, ‘ ಕ್ಷೇತ್ರದ ಜೆಡಿಎಸ್ ಮುಖಂಡರನ್ನು ಜೊತೆಗೆ ಕರೆದೊಯ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡುತ್ತೇನೆ. ಅನುದಾನದ ಹಂಚಿಕೆಯಲ್ಲಿ ನಡೆದಿರುವ ತಾರತಮ್ಯದ ಕುರಿತು ಚರ್ಚೆ ಮಾಡುತ್ತೇನೆ. ಮುಖ್ಯಮಂತ್ರಿಯವರು ಸ್ಪಂದಿಸದೇ ಹೋದರೆ, ಮುಂದೆ ಹೋರಾಟ ನಡೆಸುವುದು ಅನಿವಾರ್ಯ’ ಎಂದು ಎಚ್ಚರಿಸಿದರು.
ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಅಬ್ಬಿಗೆರೆ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಚುನಾವಣೆ ಸಮಯದಲ್ಲಿ ರಾಜಕೀಯ ಮಾಡುವುದು ಸರ್ವೆ ಸಾಮಾನ್ಯ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅವರ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಮಾತ್ರ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಇಂತಹ ತಾರತಮ್ಯವನ್ನು ರಾಜ್ಯ ರಾಜಕಾರಣದಲ್ಲಿ ನಾನು ನೋಡಿಯೇ ಇಲ್ಲ. ಅನುದಾನ ಹಂಚಿಕೆ ವಿಚಾರದಲ್ಲಿ ಇಷ್ಟೊಂದು ರಾಜಕೀಯ ಸಲ್ಲದು. ಇದು ಜನರಿಗೆ ಮಾಡುವ ಅನ್ಯಾಯ’ ಎಂದರು.
‘ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಸರ್ಕಾರ ಹಿಂಪಡೆದಿದೆ. ಕಡಿತ ಮಾಡಿದ ಅನುದಾನವನ್ನು ಮತ್ತೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಆದರೂ ಸರ್ಕಾರ ಅನುದಾನ ಬಿಡುಗಡೆಗೆ ವಿಳಂಬ ನೀತಿ ಅನುಸರಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ದಾಸರಹಳ್ಳಿ ವಿಧಾನಸಭಾಕ್ಷೇತ್ರಕ್ಕೆ ನೀಡುತ್ತಿರುವ ಅಲ್ಪ ಅನುದಾನವನ್ನು ಬಳಸಿಯೂ ಶಾಸಕ ಆರ್. ಮಂಜುನಾಥ್ ಜನಮೆಚ್ಚುವಂತೆ ಕೆಲಸವನ್ನು ಮಾಡುತ್ತಿದ್ದಾರೆ’ ಎಂದರು.
ಶಾಸಕ ಆರ್.ಮಂಜುನಾಥ್, ಜೆ.ಡಿ.ಎಸ್.ಮುಖಂಡರಾದ ರುದ್ರಗೌಡ .ಸಿ.ವೆಂಕಟೇಶ್ ಜೊತೆಯಲ್ಲಿದ್ದರು.
650 ಕೋಟಿ ಅನುದಾನಕ್ಕೆ ಕತ್ತರಿ
‘ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹ 650 ಕೋಟಿ ಅನುದಾನ ಹಂಚಿಕೆಯಾಗಿತ್ತು. ರಾಜಕಾಲುವೆ, ಮಳೆ ನೀರು ಚರಂಡಿ, ರಸ್ತೆಗಳ ಡಾಂಬರೀಕರಣ, ಕಾಂಕ್ರಿಟೀಕರಣ, ಉದ್ಯಾನಗಳ ಅಭಿವೃದ್ಧಿ, ರಸ್ತೆ ವಿಸ್ತರಣೆ ಕಾಮಗಾರಿಗಳ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದ್ದೆವು. ಟೆಂಡರ್ ಕರೆದು ಕಾರ್ಯಾದೇಶ ನೀಡುವಷ್ಟರಲ್ಲಿ ಬಿಜೆಪಿ ನೇತೃತ್ವದ
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಹಂಚಿಕೆ ಮಾಡಿದ್ದ ಅಷ್ಟೂ ಅನುದಾನವನ್ನು ಸರ್ಕಾರ ಹಿಂಪಡೆಯಿತು’ ಎಂದುಶಾಸಕ ಆರ್.ಮಂಜುನಾಥ್
ಆರೋಪಿಸಿದರು.
‘ಬಿಬಿಎಂಪಿಗೆ ಹೊಸತಾಗಿ ಸೇರಿದ 110 ಗ್ರಾಮಗಳಲ್ಲಿ ಕೆಲವು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಅವುಗಳ ಅಭಿವೃದ್ಧಿ ಕಾಮಗಾರಿಗಳಿಗೆ ₹ 405 ಕೋಟಿ ಅಗತ್ಯವಿದೆ ಎಂದು ಸರ್ಕಾರವೇ ಅಂದಾಜು ಪಟ್ಟಿ ತಯಾರಿಸಿದೆ. ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ತಲಾ ₹ 250 ಕೋಟಿ ಅನುದಾನ ಹಂಚಿಕೆ ಮಾಡಿರುವ ಸರ್ಕಾರ ದಾಸರಹಳ್ಳಿ ಕ್ಷೇತ್ರಕ್ಕೆ ಕೇವಲ ₹ 25 ಕೋಟಿ ನೀಡಿದೆ. ಈ ಬಾರಿಯ ಮಳೆಗೆ ಕ್ಷೇತ್ರದ ರಸ್ತೆಗಳು ಅಧ್ವಾನ ಸ್ಥಿತಿ ತಲುಪಿವೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.