ADVERTISEMENT

ಸ್ವಾಮಿನಾಥನ್‌ ವರದಿ ಜಾರಿಗೊಳಿಸದೆ ಭಾರತ ರತ್ನ ನೀಡುವುದು ಸರಿಯಲ್ಲ: ನಾಗಮೋಹನದಾಸ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 14:47 IST
Last Updated 11 ಫೆಬ್ರುವರಿ 2024, 14:47 IST
ಎಚ್.ಎನ್. ನಾಗಮೋಹನದಾಸ್
ಎಚ್.ಎನ್. ನಾಗಮೋಹನದಾಸ್   

ಬೆಂಗಳೂರು: ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್‌ ನೀಡಿದ ವೈಜ್ಞಾನಿಕ ವರದಿಯನ್ನು ಜಾರಿ ಮಾಡದೇ ಅವರಿಗೆ ‘ಭಾರತ ರತ್ನ‘ ನೀಡುವುದು ಸರಿಯಾದ ಗೌರವವಲ್ಲ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಪ್ರತಿಪಾದಿಸಿದರು.

ಮಲೆನಾಡು ಹಿತರಕ್ಷಣಾ ವೇದಿಕೆಯು ನಗರದಲ್ಲಿ ಹಮ್ಮಿಕೊಂಡಿದ್ದ ‘ರೈತರ ಭದ್ರತೆ–ದೇಶದ ಭದ್ರತೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸ್ವಾಮಿನಾಥನ್‌ ವರದಿಯನ್ನು ಯಾವ ಸರ್ಕಾರವೂ ಜಾರಿ ಮಾಡಿಲ್ಲ. ಲೋಕಸಭೆಯಲ್ಲಿ ಈ ಬಗ್ಗೆ ಚರ್ಚೆಯನ್ನೂ ಮಾಡಿಲ್ಲ. ವರದಿ ಜಾರಿ ಮಾಡಿದ್ದರೆ ಸ್ವಾಮಿನಾಥನ್‌ಗೆ ಅದೇ ದೊಡ್ಡ ಗೌರವವಾಗುತ್ತಿತ್ತು ಎಂದು ಹೇಳಿದರು.

ADVERTISEMENT

ರೈತರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ನಿಜ. ಜೊತೆಗೆ ರೈತರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಬಿಕ್ಕಟ್ಟು ಏನು? ಅದಕ್ಕೆ ಪರಿಹಾರ ಹೇಗೆ? ಎಂಬುದನ್ನು ತಿಳಿಯಬೇಕು ಎಂದು ತಿಳಿಸಿದರು.

ರೈತರು ಒಂದೇ ಬೆಳೆಗೆ ಸೀಮಿತವಾಗದೇ ಉಪ ಬೆಳೆಗಳನ್ನು ಬೆಳೆಯಬೇಕು. ಜೊತೆಗೆ ಸಣ್ಣ ವ್ಯವಹಾರಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ಮಣ್ಣಿನ ಫಲವತ್ತತೆ ಮತ್ತು ಲಭ್ಯ ಇರುವ ನೀರಿನ ಪ್ರಮಾಣಕ್ಕೆ ಅನುಗುಣವಾದ ಬೆಳೆಯನ್ನು ಬೆಳೆಯುವುದಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಾಧ್ಯಾಪಕ ರಾಜಶೇಖರ ಕಿಗ್ಗ ಮಾತನಾಡಿ, ‘ಕೃಷಿ ಆಕರ್ಷಣೆಯನ್ನು ಕಳೆದುಕೊಂಡು ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ. ರೈತರ ಸಮಸ್ಯೆ ಎಂದರೆ ಜಮೀನು ಇರುವ ರೈತರಿಗೆ ಸೀಮಿತವಾಗಿರುವುದಿಲ್ಲ. ಕೃಷಿ ಕೂಲಿಕಾರರ, ಬಡವರ ಸಮಸ್ಯೆಯೂ ಆಗಿದೆ’ ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಮಾತನಾಡಿ, ‘ಮಲೆನಾಡು ಒಂದು ಕಾಲದಲ್ಲಿ ಸಮೃದ್ಧವಾಗಿತ್ತು. 20 ವರ್ಷಗಳಿಂದ ಈಚೆಗೆ ರೈತರು ಆರ್ಥಿಕವಾಗಿ ಹಿಂದುಳಿಯುತ್ತಿದ್ದಾರೆ. ಬೆಳೆವ ಎಲ್ಲ ಬೆಳೆಗಳಿಗೂ ರೋಗ ಬಾಧಿಸುತ್ತಿದೆ’ ಎಂದು ವಿಷಾದಿಸಿದರು.

ಮಲೆನಾಡು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅರವಿಂದ ಸೀಗದಾಳು ಅಡಿಕೆ ಬೆಳೆಗಾರರ ಸಂಕಷ್ಟವನ್ನು ತೆರೆದಿಟ್ಟರು. ಮಲೆನಾಡು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಜಿತ್‌ ಡಿ. ಕಲ್ಕುಳಿ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.