ADVERTISEMENT

Bengaluru Kambala | ಕರಾವಳಿ ಸಂಸ್ಕೃತಿ ಬಿಂಬಿಸಿದ ಪ್ರಾಚೀನ ಪರಿಕರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2023, 23:30 IST
Last Updated 26 ನವೆಂಬರ್ 2023, 23:30 IST
<div class="paragraphs"><p>ಬೆಂಗಳೂರು ಕಂಬಳದ ವಸ್ತು ಪ್ರದರ್ಶನದಲ್ಲಿ ಭಾನುವಾರ ಜನರು ಪುರಾತನ ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿದರು -ಪ್ರಜಾವಾಣಿ ಚಿತ್ರ/ ರಂಜು ಪಿ</p></div>

ಬೆಂಗಳೂರು ಕಂಬಳದ ವಸ್ತು ಪ್ರದರ್ಶನದಲ್ಲಿ ಭಾನುವಾರ ಜನರು ಪುರಾತನ ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿದರು -ಪ್ರಜಾವಾಣಿ ಚಿತ್ರ/ ರಂಜು ಪಿ

   

ಬೆಂಗಳೂರು: ಪುರಾತನ ವಸ್ತುಗಳು ನೋಡಲು ಸಿಗುವುದೇ ಅಪರೂಪ. ಮುಂದಿನ ಜನಾಂಗಕ್ಕೆ ತೋರಿಸಬೇಕಿದ್ದರೆ ಪ್ರದರ್ಶನಗಳು ನಡೆಯಬೇಕು. ಕಲೆ, ಸಂಸ್ಕೃತಿ ಬಗ್ಗೆ ತಿಳಿವಳಿಕೆಗೆ ಇದು ಅಗತ್ಯವೂ ಹೌದು. ಬೆಂಗಳೂರಿನ ಈ ಪ್ರದರ್ಶನದಲ್ಲಿ ನೋಡಿದ ವಸ್ತುಗಳು ನಮ್ಮ ಊರಿನಲ್ಲೇ ಸಿಗುವುದಿಲ್ಲ ಎಂದು ಹುಬ್ಬೇರಿಸಿದವರು ಮಾಲಾಡಿಯ ಕೃಷ್ಣನ್‌.

ದೈವದ ತಲೆಪಟ್ಟಿ, ಮೊಗ, ಗಗ್ಗರ, ಪಂಜುರ್ಲಿ ಮೊಗ, ಬಟ್ಟಲು ಹಾಗೂ ಪ್ರಾಚೀನ ಕಾಲದಲ್ಲಿ ದೈವಾರಾಧನೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ಪರಿಕರಗಳನ್ನು ಜೋಪಾನವಾಗಿ ಜೋಡಿಸಿ ಮುಂದಿನ ಪೀಳಿಗೆಗೂ ತಿಳಿಯಪಡಿಸುವ ಕಾರ್ಯವನ್ನು ಬೆಂಗಳೂರಿನ ಕಂಬಳದಲ್ಲಿ ಅಚ್ಚುಕಟ್ಟಾಗಿ ಮಾಡಿದವರು ಉಡುಪಿ ಜಿಲ್ಲೆ ಹಿರ್ಗಾನ ನೆಲ್ಲಿಕಟ್ಟೆಯ ಸುಧಾಕರ ಶೆಟ್ಟಿ ಅವರು.

ADVERTISEMENT

ಸುಮಾರು 30 ವರ್ಷಗಳಿಂದ ಜೋಪಾನವಾಗಿರಿಸಿದ 10 ಸಾವಿರಕ್ಕೂ ಮಿಕ್ಕಿದ ಕರಾವಳಿ ಸಂಸ್ಕೃತಿ ಬಿಂಬಿಸುವ ಪರಿಕರಗಳನ್ನು ವೀಕ್ಷಕರಿಗೆ ತೆರೆದಿಡಲಾಗಿತ್ತು. ಭೂತಾರಾಧನೆ, ದೇವತಾರಾಧನೆ, ಚರಿತ್ರೆ, ಕ್ರೀಡೆ, ಕೃಷಿ, ವಿವಿಧ ಜನಾಂಗದ ಕುಲಕಸುಬು, ಗೃಹ ವಸ್ತುಗಳು, ಯಕ್ಷಗಾನಕ್ಕೆ ಸಂಬಂಧಿಸಿದ ಸಂಗ್ರಹವೇ ಕಣ್ಣೆದುರು ತೆರೆದುಕೊಳ್ಳುತ್ತದೆ.

ಅಡುಗೆ ತಯಾರಿಸಲು ಬಳಸುತ್ತಿದ್ದ ಪಾತ್ರೆಗಳು, ಕೃಷಿ ಬಳಕೆಯಲ್ಲಿರುವ ನೇಗಿಲು, ಹಗ್ಗ, ಕೊಯ್ಲಿನ ಸಾಮಗ್ರಿಗಳು, ಆಯುಧಗಳು ಗಮನ ಸೆಳೆಯುತ್ತವೆ. ಪಲ್ಲಕ್ಕಿ, ವಿವಿಧ ಬಗೆಯ ತೊಟ್ಟಿಲು ನೋಡುಗರನ್ನು ಆಕರ್ಷಿಸಿದವು.

ಕಂಬಳದಲ್ಲಿ ಬಳಕೆ ಮಾಡುವ ಹಳೆಯ ಪರಿಕರ ಮತ್ತು ಇತ್ತೀಚೆಗೆ ಬಳಕೆಯಲ್ಲಿರುವ ವಸ್ತುಗಳನ್ನು ಅಕ್ಕಪಕ್ಕ ಜೋಡಿಸಿ ಇಡಲಾಗಿತ್ತು. ವಿವಿಧ ಬಗೆಯ ಬಟ್ಟಲು, ಲೋಟಗಳು, ಪಾತ್ರೆಗಳು, ಅಳತೆ ಮಾಡುವ ಸೇರು, ಪಾವು ಮೊದಲಾದ ವಸ್ತುಗಳನ್ನು ಜನರು ಕುತೂಹಲದಿಂದ ವೀಕ್ಷಣೆ ಮಾಡಿ ವಿವರಗಳನ್ನು ಪಡೆದುಕೊಂಡರು.

2500 ವರ್ಷಗಳ ನಾಣ್ಯದ ಸಂಗ್ರಹ, 150ಕ್ಕೂ ಹೆಚ್ಚು ದೇಶಗಳ ನೋಟುಗಳು ನೋಡುಗರನ್ನು ಸೆಳೆಯಿತು. ಅಳುಪರ ಕಾಲದ, ಬೈರವರಸನ ಕಾಲದ ನಾಣ್ಯಗಳಿಂದ ಹಿಡಿದು ಇತ್ತೀಚಿನವರೆಗಿನ ನಾಣ್ಯಗಳೂ ಅಲ್ಲಿದ್ದವು. ಇವುಗಳ ಸಂಗ್ರಹದಲ್ಲಿ ಅಶಿತಾ ಎಸ್‌.ಕಡಂಬ ಅವರ ಪಾತ್ರ ಹಿರಿದು.

ಕಳೆದ 30 ವರ್ಷಗಳಿಂದ ವಿವಿಧ ಪ್ರಾಚೀನ ವಸ್ತುಗಳ ಸಂಗ್ರಹದಲ್ಲಿ ತೊಡಗಿದ್ದೇನೆ. ಕೆಲವರು ವಸ್ತುಪ್ರದರ್ಶನದಲ್ಲಿ ಹಳೆ ಕಾಲದ ವಸ್ತುಗಳನ್ನು ನೋಡಿ ಅವರ ಮನೆಯಲ್ಲಿದ್ದರೆ ತಂದುಕೊಡುತ್ತಾರೆ. ಇನ್ನು ಕೆಲವರು ಆಧುನಿಕತೆಗೆ ತಕ್ಕಂತೆ ತಮ್ಮಲ್ಲಿನ ಪ್ರಾಚೀನ ವಸ್ತುಗಳಿಗೆ ಹೊಸತನವನ್ನು ನೀಡಲು ಮುಂದಾಗುತ್ತಾರೆ. ಆಗ ಹಳೆಯ ವಸ್ತುಗಳನ್ನು ಕೊಟ್ಟು ಹೊಸ ವಸ್ತು ತೆಗೆದುಕೊಳ್ಳುತ್ತಾರೆ. ಹಳ್ಳಿಗಳಲ್ಲೇ ನಮಗೆ ಹೆಚ್ಚಿನ ವಸ್ತುಗಳು ಸಿಗುತ್ತವೆ ಎಂದು ಸುಧಾಕರ ಶೆಟ್ಟಿ ಮಾಹಿತಿ ನೀಡಿದರು.

ಇಂದಿನ ಯುವಕರಿಗೆ ಪ್ರಾಚೀನ ಪರಿಕರಗಳ ಬಳಕೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿವಳಿಕೆ ಬಹಳ ಕಡಿಮೆ. ಹಿರಿಯರಿಗೆ ಅವರು ಬಳಕೆ ಮಾಡಿದ ವಸ್ತುಗಳನ್ನು ನೋಡುವುದೇ ಖುಷಿ. ಈಗ ಜೀವನ ಪದ್ಧತಿಯೂ ಬದಲಾಗಿದೆ. ಹೀಗಾಗಿ ಮಕ್ಕಳಿಗೆ, ಯುವಕರಿಗೆ ಇದರ ಪರಿಚಯ ಮಾಡುವುದು ಅಗತ್ಯ ಎಂದು ಸುಧಾಕರ ಶೆಟ್ಟಿ ಅಭಿಪ್ರಾಯಪಟ್ಟರು.

ಕೆಲವು ಹಳೆ ಕಾಲದ ನಾಣ್ಯ ಸಂಗ್ರಹಕ್ಕೆ ಹಲವರ ಬೆನ್ನು ಬೀಳಬೇಕಾಗುತ್ತದೆ. ಈಗ ಉಚಿತವಾಗಿ ಸಿಗುವ ಕಾಲ ಮುಗಿದುಹೋಯಿತು. ಹಾಗಾಗಿ ಹಳೆಯ ವಸ್ತುಗಳನ್ನು ಕೊಂಡುಕೊಳ್ಳುವಾಗ ಹೆಚ್ಚು ಬೆಲೆ ತೆರಬೇಕಾಗುತ್ತದೆ. ಮಧ್ಯವರ್ತಿಗಳು ಹೇಳಿದ್ದೇ ಬೆಲೆ ಎಂಬಂತಾಗಿದೆ. ಇರುವುದನ್ನು ಉಳಿಸಿಕೊಳ್ಳುವುದು ಮುಖ್ಯ ಎನ್ನುತ್ತಾರೆ ಅವರು.

ನಮ್ಮ ಹಿರಿಯರು ಬಳಸಿದ ವಸ್ತುಗಳನ್ನು ಒಂದೆಡೆ ನೋಡಬೇಕೆಂದರೆ ಪ್ರದರ್ಶನಗಳು ಅನಿವಾರ್ಯ. ಮುಂದಿನ ಪೀಳಿಗೆಗೂ ಸಂಸ್ಕೃತಿಯ ತಿಳಿವಳಿಕೆ ಉಳಿವಿಗೆ ಇದು ಮಹತ್ವದ ಕೊಡುಗೆ ಆಗಬಲ್ಲದು.
ಕೃಷ್ಣನ್‌ ಮಾಲಾಡಿ

ಭೂತಾರಾಧನೆಯ ವಿವಿಧ ವಸ್ತುಗಳನ್ನು ಜನ ಕುತೂಹಲದಿಂದ ವೀಕ್ಷಿಸುತ್ತಿದ್ದರು. ಕಾಂತಾರದಲ್ಲಿ ಬಳಸಿದ ವಸ್ತುಗಳು ಇವೆಯೇ ಎಂದು ವಿಚಾರಿಸುತ್ತಿದ್ದುದೂ ಕಂಡುಬಂತು. ಹಲವರು ಮಾರಾಟಕ್ಕೆ ಇದೆಯೇ ಎಂದು ವಿಚಾರಿಸುತ್ತಿದ್ದರು.

ಮುಂದಿನ ಪೀಳಿಗೆಗೆ ತುಳುನಾಡಿನ ಸಂಸ್ಕೃತಿ ಪರಿಚಯಿಸಲು ಈ ಬಾರಿಯ ಬೆಂಗಳೂರು ಕಂಬಳದಲ್ಲಿ ವ್ಯವಸ್ಥೆ ಮಾಡಿದ್ದು ಖುಷಿ ನೀಡಿತು. ಕಾಂತಾರ ಚಲನಚಿತ್ರದಲ್ಲಿ ಬಳಕೆ ಮಾಡಿದ ಬಹುತೇಕ ಪರಿಕರಗಳನ್ನು ಈ ಬಾರಿಯ ಬೆಂಗಳೂರು ಕಂಬಳದಲ್ಲಿ ವೀಕ್ಷಿಸುವಂತಾಯಿತು ಎಂದು ಬೆಂಗಳೂರಿನ ಜೀವನ್‌ ಖುಷಿ ವ್ಯಕ್ತಪಡಿಸಿದರು.

ವಸ್ತು ಪ್ರದರ್ಶನದಲ್ಲಿ ಬೆಳಿಗ್ಗಿನಿಂದಲೇ ನೂಕುನುಗ್ಗಲು ಕಂಡುಬಂತು. ಬಹುತೇಕರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.

ಚಲನಚಿತ್ರದಲ್ಲಿ ಬಳಕೆ

ನಮ್ಮ ಸಂಗ್ರಹದಲ್ಲಿರುವ ಪ್ರಾಚೀನ ಪರಿಕರಗಳು ಹಲವು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದೆ. ದೈವದ ಮೊಗ, ಕಡ್ಸಲೆ, ಗಗ್ಗರ, ತಲೆಪಟ್ಟಿ, ಸೊಂಟಪಟ್ಟಿಗಳು ಕಾಂತಾರ ಚಲನಚಿತ್ರದಲ್ಲಿ ಕಾಣಿಸಿಕೊಂಡಿದೆ. ಕೊರಮ, ಕಾರ್ಣಿಕದ ಕಲ್ಲುರ್ಟಿ, ಕಂಬಳಬೆಟ್ಟು ಭಟ್ರೆನ ಮಗಲ್‌ ಮೊದಲಾದ ಸಿನಿಮಾಗಳಲ್ಲಿ ಕಾನಿಸಿಕೊಂಡ ಹಲವು ವಸ್ತುಗಳೂ ಈ ಪ್ರದರ್ಶನದಲ್ಲಿ ಕಂಡುಬಂತು.

ಗುಜರಿ ವಸ್ತುಗಳು ಎಂದು ತಿಳಿದವರೇ ಹೆಚ್ಚು

ಪ್ರಾಚೀನ ವಸ್ತುಗಳನ್ನು ಗುಜರಿ ವಸ್ತುಗಳು ಎಂದು ತಿಳಿದವರೇ ಹೆಚ್ಚು. ಪ್ರಾಚೀನ ವಸ್ತುಗಳ ಬಳಕೆಯ ಮರುಸೃಷ್ಟಿ ಸಾಧ್ಯವಿಲ್ಲವಾದರೂ ಮಕ್ಕಳಿಗೆ ಯುವಕರಿಗೆ ಹಳೆ ಕಾಲದ ವಸ್ತುಗಳ ಪರಿಚಯ ಮಾಡಿಕೊಡುವುದು ಮುಖ್ಯ. ಜೀವನಶೈಲಿಯೇ ಬದಲಾಗುತ್ತಿರುವ ಕಾಲದಲ್ಲಿ ನಾವೂ ಅದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಸುಧಾಕರ ಶೆಟ್ಟಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.