ಬೆಂಗಳೂರು: ನಗರವನ್ನು ಉತ್ತಮ ‘ಬ್ರ್ಯಾಂಡ್–ಬೆಂಗಳೂರು’ ಮತ್ತು ಜಾಗತಿಕ ನಗರವನ್ನಾಗಿ ಮಾಡಲು ಅಧ್ಯಯನ ವರದಿಯನ್ನು ಸಲ್ಲಿಸಲು ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ ನೇತೃತ್ವದಲ್ಲಿ ‘ತಜ್ಞರ ಸಮಿತಿ’ಯನ್ನು ಸರ್ಕಾರ ಮತ್ತೆ ಪುನರ್ ರಚಿಸಿದೆ.
2014ರಲ್ಲಿ ಬಿಬಿಎಂಪಿ ವಿಭಜನೆ ಸಂಬಂಧ ವರದಿ ನೀಡಲು ರಚಿಸಲಾಗಿದ್ದ ‘ತಜ್ಞರ ಸಮಿತಿ’ಯನ್ನೇ ಜೂನ್ 12ರಂದು ಪುನರ್–ರಚಿಸಲಾಗಿತ್ತು. ಜುಲೈ 18ರಂದು ಮತ್ತೊಮ್ಮೆ ಈ ಸಮಿತಿಯನ್ನು ಪುನರ್ ರಚಿಸಿದ್ದು, ಬಿಬಿಎಂಪಿ– ಬಿಡಿಎ ಆಯುಕ್ತರಾಗಿದ್ದ ಸಿದ್ದಯ್ಯ ಮತ್ತು ಹಿಂದಿನ ಬೆಂಗಳೂರು ಅಜೆಂಡಾ ಕಾರ್ಯಪಡೆಯ ಸದಸ್ಯ ರವಿಚಂದರ್ ಅವರ ಜೊತೆಗೆ ರಾಜ್ಯಸಭೆ ಮಾಜಿ ಸದಸ್ಯ ಎಂ.ವಿ ರಾಜೀವ್‌ಗೌಡ ಸದಸ್ಯರಾಗಿದ್ದಾರೆ.
ಆರು ಅಂಶಗಳನ್ನು ಗುರುತಿಸಿ, ಈ ಬಗ್ಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ.
* ಬೆಂಗಳೂರು ಮಹಾನಗರ ವ್ಯಾಪ್ತಿಯ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್‌ಬಿ, ಬಿಎಂಆರ್‌ಡಿಎ, ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್), ಬಿಎಂಎಲ್‌ಟಿಎ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದಂತಹ ಇಲಾಖೆಗಳನ್ನು ಒಳಗೊಂಡ ಬೆಂಗಳೂರಿನ ಆಡಳಿತವನ್ನು ‘ಮರು–ಇಮೇಜಿಂಗ್’ ಮಾಡಲು ಕೈಗೊಳ್ಳಬೇಕಾದ ಪ್ರಕ್ರಿಯೆಗಳು.
* ಬೆಂಗಳೂರು ಮಹಾನಗರ ಪೊಲೀಸ್, ಅಗ್ನಿಶಾಮಕ ವಿಭಾಗ, ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬಿಎಂಟಿಸಿ, ಬೆಸ್ಕಾಂ, ಉಪನಗರ ರೈಲು ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸಮನ್ವಯ ಸಾಧಿಸುವ ಕ್ರಮಗಳು.
* ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಮಾಡಲು ಸಂಚಾರ ನಿರ್ವಹಣೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸರಿಯಾದ ಬಳಕೆ, ಸಾರ್ವಜನಿಕ– ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ–ಆಡಳಿತ, ಉತ್ತಮ ಗುಣಮಟ್ಟದ ನೀರಿನ ಲಭ್ಯತೆ– ಭದ್ರತೆ, ಪ್ರವಾಹಗಳ ಸಮರ್ಪಕ ನಿರ್ವಹಣೆ, ಉತ್ತಮ ಆಡಳಿತಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನಗಳ ಸೂಚನೆ. ಸಮರ್ಥನೀಯ ಮತ್ತು ಸುಸ್ಥಿರ ಸ್ಥಿತಿಸ್ಥಾಪಕ ಚೇತೋಹಾರಿ ನಗರವನ್ನು ರಚಿಸಲು ಯೋಜಿತ ಮತ್ತು ವೈಜ್ಞಾನಿಕ ರೀತಿಯ ಸವಾಲು ಎದುರಿಸಲು ಅಗತ್ಯ ಕ್ರಮ ಮತ್ತು ಶಿಫಾರಸು.
* ಬ್ರ್ಯಾಂಡ್ ಬೆಂಗಳೂರು ಬಲಿಷ್ಠಗಳಿಸುವ ಕಾರ್ಯಗಳು
* ಮೆಟ್ರೊಪಾಲಿಟನ್ ಯೋಜನಾ ಸಮಿತಿ (ಎಂಪಿಸಿ) ಸ್ಥಾಪನೆ ಸೇರಿದಂತೆ 74ನೇ ತಿದ್ದುಪಡಿಗೆ ಅನುಗುಣವಾಗಿ ವಾರ್ಡ್ ಮಟ್ಟದಲ್ಲಿ ನಾಗರಿಕರ ಭಾಗವಹಿಸುವಿಕೆಯಿಂದ ಅಧಿಕಾರ ವಿಕೇಂದ್ರೀಕರಣ, ಉನ್ನತ ಮಟ್ಟದಲ್ಲಿ ಕೇಂದ್ರೀಕರಣದ ಕ್ರಮಗಳು
* ನಾಗರಿಕ ಕೇಂದ್ರಿತವಾದ ಸೇವೆಗಳಿಗೆ ಆಡಳಿತ ಮತ್ತು ನಿರ್ವಹಣೆಯನ್ನು ಸುಧಾರಿಸುವ ಪ್ರಕ್ರಿಯೆಗಳು
* ಸರ್ಕಾರ ನಿರ್ದೇಶಿಸುವ ಯಾವುದೇ ಮಹತ್ವದ ವಿಷಯದ ಬಗ್ಗೆ ವರದಿ ನೀಡಬೇಕು.
ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರು ಸಮಿತಿಗೆ ಬೇಕಾದ ಮಾಹಿತಿ ಒದಗಿಸಬೇಕು ಮತ್ತು ಸಭೆಗಳ ಸಮನ್ವಯ ಕಾರ್ಯ ನಿರ್ವಹಿಸಲು ಆದೇಶದಲ್ಲಿ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.