ADVERTISEMENT

ಸ್ಫೋಟಕ ಬಳಕೆ: ಐಎಎಸ್ ಅಧಿಕಾರಿ ಪತ್ನಿ ವಿರುದ್ಧ ಎಫ್‌ಐಆರ್

ಮನೆಯೊಂದರ ಗೋಡೆ ಬಿರುಕು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 20:10 IST
Last Updated 11 ಮಾರ್ಚ್ 2023, 20:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಪಾಯ ಅಗೆಯುತ್ತಿದ್ದಾಗ ಎದುರಾದ ಬಂಡೆ ಒಡೆಯಲು ಅಕ್ರಮವಾಗಿ ಸ್ಫೋಟಕ ಬಳಸಲಾಗಿದ್ದು, ಐಎಎಸ್ ಅಧಿಕಾರಿಯ ಪತ್ನಿ ಸೇರಿ ಹಲವರ ವಿರುದ್ಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಸ್ಫೋಟದ ಸಂಬಂಧ ಸ್ಥಳೀಯ ನಿವಾಸಿ ಸೋಮಶೇಖರ್‌ ದೂರು ನೀಡಿದ್ದಾರೆ. ಜಾಗದ ಮಾಲೀಕರಾದ ಮಹಿಳೆ, ಗುತ್ತಿಗೆದಾರ ಹಾಗೂ ಇತರರ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆಂಧ್ರಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಐಎಎಸ್ ಅಧಿಕಾರಿಯೊಬ್ಬರ ಪತ್ನಿ, ಠಾಣೆ ವ್ಯಾಪ್ತಿಯಲ್ಲಿ ನಿವೇಶನ ಖರೀದಿಸಿದ್ದಾರೆ. ಅದೇ ನಿವೇಶನದಲ್ಲಿ ಶಾಲೆ ಕಟ್ಟಡ ನಿರ್ಮಾಣದ ಕೆಲಸ ಆರಂಭವಾಗಿದೆ. ಪಾಯ ಅಗೆಯುವಾಗ ಬೃಹತ್ ಬಂಡೆ ಅಡ್ಡಿಯಾಗಿತ್ತು. ಮಾರ್ಚ್ 8ರಂದು ಅಕ್ರಮವಾಗಿ ಸ್ಫೋಟಕ ಬಳಸಿ ಬಂಡೆಯನ್ನು ಸ್ಫೋಟಿಸಿರುವ ಆರೋಪ ವ್ಯಕ್ತವಾಗಿದೆ.’

ADVERTISEMENT

‘ನಿವೇಶನಕ್ಕೆ ಹೊಂದಿಕೊಂಡಂತೆ ಸೋಮಶೇಖರ್ ಮನೆ ಇದೆ. ಸ್ಫೋಟದಿಂದಾಗಿ ಅವರ ಮನೆಯ ಗೋಡೆಯಲ್ಲಿ ಸಣ್ಣದಾದ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಸೋಮಶೇಖರ್, ಠಾಣೆಗೆ ದೂರು ನೀಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಸ್ಫೋಟಕ ಬಳಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಂಬ್‌ ನಿಷ್ಕ್ರಿಯ ದಳದ ಪರಿಶೀಲನೆ: ಪ್ರಕರಣ ದಾಖಲಾಗುತ್ತಿದ್ದಂತೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆಲ ಮಾದರಿಗಳನ್ನು ಸಂಗ್ರಹಿಸಿದರು.

‘ನಿವೇಶನದ ಜಾಗದಲ್ಲಿ ಸ್ಫೋಟಕ ಬಳಕೆ ಮಾಡಿರುವುದಕ್ಕೆ ಪುರಾವೆಗಳು ಲಭ್ಯವಾಗಿವೆ. ಸ್ಫೋಟದ ಸದ್ದು ಕೇಳಿದ್ದ ಜನ ಸಹ ಹೇಳಿಕೆ ನೀಡಿದ್ದಾರೆ. ಸ್ಫೋಟಕ್ಕೆ ಜಿಲಿಟಿನ್ ಕಡ್ಡಿ ಬಳಕೆ ಮಾಡಿರುವ ಅನುಮಾನವಿದೆ. ತಜ್ಞರ ವರದಿ ಬಂದ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಹೇಳಿದರು.

ಕೆಲಸಕ್ಕೆ ಗೈರಾಗಿದ್ದಕ್ಕೆ ಕಾರ್ಮಿಕನ ಕೊಲೆ
ಬೆಂಗಳೂರು:
ಕೆಲಸಕ್ಕೆ ಗೈರಾದರೆಂಬ ಕಾರಣಕ್ಕೆ ಕಾರ್ಮಿಕ ಕೋಯಲ್ (43) ಎಂಬುವವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಗಾರೆ ಮೇಸ್ತ್ರಿ ಕಿಶೋರ್ (45) ಅವರನ್ನು ಕಾಡುಗೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಉತ್ತರ ಪ್ರದೇಶದ ಕೋಯಲ್, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕಾಡುಗೋಡಿಯ ಶೆಡ್‌ವೊಂದರಲ್ಲಿ ವಾಸವಿದ್ದರು. ಆರೋಪಿ ಕಿಶೋರ್, ಮಹಾರಾಷ್ಟ್ರದವರು. ನಗರದಲ್ಲಿ ಕಟ್ಟಡ ನಿರ್ಮಾಣದ ಮೇಸ್ತ್ರಿ ಆಗಿ ಕೆಲಸ ಮಾಡುತ್ತಿದ್ದ. ಕೊಲೆ ಸಂಬಂಧ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ಶೆಡ್‌ಗೆ ನುಗ್ಗಿ ಹಲ್ಲೆ: ‘ಕಾರ್ಮಿಕ ಕೋಯಲ್, ಆರೋಪಿ ಕಿಶೋರ್ ಬಳಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಕೋಯಲ್ ಕೆಲಸಕ್ಕೆ ಹೋಗಿರಲಿಲ್ಲ. ಅವರು ಕೆಲಸಕ್ಕೆ ಗೈರಾಗಿದ್ದಕ್ಕೆ ಕಿಶೋರ್ ಸಿಟ್ಟಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಕೋಯಲ್‌ ವಾಸವಿದ್ದ ಶೆಡ್‌ಗೆ ರಾತ್ರಿ ನುಗ್ಗಿದ್ದ ಕಿಶೋರ್, ‘ಕೆಲಸಕ್ಕೆ ಏಕೆ ಬಂದಿಲ್ಲ’ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇಬ್ಬರ ನಡುವೆ ಜಗಳ ಶುರುವಾಗಿತ್ತು. ಕೋಯಲ್ ಮೇಲೆ ಹಲ್ಲೆ ಮಾಡಿದ್ದ ಕಿಶೋರ್, ಸ್ಥಳದಿಂದ ಹೊರಟು ಹೋಗಿದ್ದ. ತೀವ್ರ ಗಾಯಗೊಂಡು ಕೋಯಲ್ ಸ್ಥಳದಲ್ಲೇ ಮೃತಪಟ್ಟಿದ್ದರು’

‘ಶನಿವಾರ ಬೆಳಿಗ್ಗೆ ಕೋಯಲ್, ಶೆಡ್‌ನಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ಸ್ಥಳೀಯರು, ಶೆಡ್‌ನೊಳಗೆ ಹೋಗಿ ನೋಡಿದ್ದಾಗ ಕೋಯಲ್ ಮೃತಪಟ್ಟಿದ್ದು ಗೊತ್ತಾಗಿತ್ತು. ಸ್ಥಳೀಯರೇ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.