ಬೆಂಗಳೂರು: ಉದ್ಯಮಿಯೊಬ್ಬರ ಕಂಪನಿ ಮೇಲೆ ದಾಳಿ ನಡೆಸಿ, ₹1.5 ಕೋಟಿ ಸುಲಿಗೆ ಮಾಡಿದ್ದ ಆರೋಪದ ಅಡಿ ಬಂಧನಕ್ಕೆ ಒಳಗಾಗಿ ಸಿಸಿಬಿ ಕಸ್ಟಡಿಯಲ್ಲಿರುವ ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಸೇರಿ ನಾಲ್ವರು ಅಧಿಕಾರಿಗಳ ವಿಚಾರಣೆಯನ್ನು ತನಿಖಾಧಿಕಾರಿಗಳು ತೀವ್ರಗೊಳಿಸಿದ್ದಾರೆ.
ಜೀವನ್ ಬಿಮಾನಗರದ ಜಿ.ಎಂ. ಪಾಳ್ಯದ ಉದ್ಯಮಿ ಕೇಶವ್ ತಕ್ ಅವರು ನೀಡಿದ ದೂರು ಆಧರಿಸಿ ಜಿಎಸ್‌ಟಿ ಗುಪ್ತಚರ ವಿಭಾಗದ ಮಹಾ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ವ್ಯಾಪ್ತಿಯ ದಕ್ಷಿಣ ವಲಯದ ಅಧೀಕ್ಷಕ ಅಭಿಷೇಕ್, ಹಿರಿಯ ಗುಪ್ತಚರ ಅಧಿಕಾರಿಗಳಾದ ಮನೋಜ್ ಸೈನಿ, ನಾಗೇಶ್ ಬಾಬು ಹಾಗೂ ಗುಪ್ತಚರ ಅಧಿಕಾರಿ ಸೋನಾಲಿ ಸಹಾಯ್ ಅವರನ್ನು ಬಂಧಿಸಿ, 10 ದಿನ ಸಿಸಿಬಿ ಕಸ್ಟಡಿಗೆ ಪಡೆದುಕೊಂಡಿತ್ತು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
‘ಆರೋಪಿಗಳಿಂದ ಮೊಬೈಲ್ ಫೋನ್, ಚೆಕ್‌ಬುಕ್, ಲ್ಯಾಪ್‌ಟಾಪ್ ಜಪ್ತಿ ಮಾಡಿಕೊಳ್ಳಲಾಗಿತ್ತು. ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಸೈಬರ್ ತಜ್ಞರು ಪರಿಶೀಲನೆ ನಡೆಸಲಿದ್ದಾರೆ. ಇನ್ನೂ ಕೆಲವು ಉದ್ಯಮಿಗಳಿಗೆ ಆರೋಪಿಗಳು ಇದೇ ಮಾದರಿಯಲ್ಲಿ ವಂಚನೆ ನಡೆಸಿರುವ ಸಾಧ್ಯತೆಯಿದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
‘ಮನೆ ಸೇರಿದಂತೆ ವಿವಿಧ ಸ್ಥಳಗಳಿಗೆ ಗುರುವಾರ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಲಾಯಿತು’ ಎಂದು ಸಿಸಿಬಿ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.