ADVERTISEMENT

ಬೆಂಗಳೂರು | ವಿದ್ಯಾರ್ಥಿಗಳಿಂದ ₹ 50 ಸಾವಿರ ಸುಲಿಗೆ; ಮೂವರ ಬಂಧನ

ನಗದು, ಲ್ಯಾಪ್‌ಟಾಪ್ ವಶ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 15:57 IST
Last Updated 23 ನವೆಂಬರ್ 2024, 15:57 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕಾರು ಬಾಡಿಗೆ ಪಡೆದು ಮಡಿಕೇರಿಗೆ ಪ್ರವಾಸ ಕೈಗೊಂಡಿದ್ದ ವಿದ್ಯಾರ್ಥಿಗಳು, ವೇಗವಾಗಿ ಕಾರು ಚಾಲನೆ ಮಾಡುವ ಮೂಲಕ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಬಾಡಿಗೆ ನೀಡಿದ ಕಂಪನಿಯವರು ಆರೋಪಿಸಿ, ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ADVERTISEMENT

ಮತ್ತಿಕೆರೆಯ ಐದನೇ ಸೆಮಿಸ್ಟರ್ ಬಿಬಿಎ ವಿದ್ಯಾರ್ಥಿ ನೀಡಿದ ದೂರು ಆಧರಿಸಿ ಚಂದ್ರ ಲೇಔಟ್ ಪೊಲೀಸರು ವಿನೋದ್, ಶಶಾಂಕ್ ಮತ್ತು ನಿತಿನ್ ಎಂಬುವರನ್ನು ಬಂಧಿಸಿ, ₹ 30 ಸಾವಿರ ನಗದು ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ. ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ.

'ನಾಗರಬಾವಿಯಲ್ಲಿರುವ ಕಂಪನಿಯೊಂದರಿಂದ ‘ರೆಂಟ್‌ ಎ ಕಾರ್‌’ ಅಡಿಯಲ್ಲಿ ಕಾರು ಬಾಡಿಗೆಗೆ ಪಡೆದು ಐವರು ವಿದ್ಯಾರ್ಥಿಗಳು ಭಾನುವಾರ ಮಡಿಕೇರಿಗೆ ಪ್ರವಾಸಕ್ಕೆ ಹೋಗಿದ್ದರು. ಕಾರು 120 ಬಾರಿ 100 ಕಿಲೋ ಮೀಟರ್‌ ವೇಗ ದಾಟಿದೆ ಎಂಬ ನೆಪದಲ್ಲಿ ಕಾರು ಬಾಡಿಗೆಗೆ ನೀಡಿದ ಕಂಪನಿಯ ಸಿಬ್ಬಂದಿ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಬೆದರಿಸಿ ₹50 ಸಾವಿರ ವಸೂಲು ಮಾಡಿದ್ದಾರೆ. ಜತೆಗೆ ಲ್ಯಾಪ್‌ಟಾಪ್‌ ಕಿತ್ತುಕೊಂಡಿದ್ದರು ಎಂದು ವಿದ್ಯಾರ್ಥಿಗಳು ದೂರಿನಲ್ಲಿ ಉಲ್ಲೇಖಿಸಿರುವುದಾಗಿ’ ಪೊಲೀಸರು ತಿಳಿಸಿದ್ದಾರೆ.

‘120 ಬಾರಿ ವೇಗ ಮಿತಿಯನ್ನು ಮೀರಿ ಕಾರು ಓಡಿಸಿರುವುದರಿಂದ ₹1.20 ಲಕ್ಷ ದಂಡ ಕಟ್ಟಬೇಕು ಎಂದು ಆರೋಪಿಗಳು ಸೂಚಿಸಿದ್ದರು. ಸಂಚಾರ ನಿಯಮ ಉಲ್ಲಂಘನೆಯ ಪುರಾವೆ ಅಥವಾ ಚಲನ್‌ಗಳನ್ನು ತೋರಿಸುವಂತೆ ವಿದ್ಯಾರ್ಥಿಗಳು ಕೇಳಿದಾಗ, ಅವರು ಮೂರು ಉಲ್ಲಂಘನೆಗಳ ಸ್ಕ್ರೀನ್‌ಶಾಟ್ ಮಾತ್ರ ತೋರಿಸಿದ್ದರು. ಉಳಿದವುಗಳನ್ನು ತೋರಿಸಲು ನಿರಾಕರಿಸಿದ್ದರು’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

‘ನಿತಿನ್ ಹಾಗೂ ಮತ್ತೊಬ್ಬ ವ್ಯಕ್ತಿ, ಹಣ ಪಾವತಿಸಿ ಹೊರಡುವಂತೆ ವಿದ್ಯಾರ್ಥಿಗಳಿಗೆ ಬೆದರಿಸಿದ್ದರು. ವಿದ್ಯಾರ್ಥಿಗಳು,‌ ತಮ್ಮ ಸಹೋದರಿ ಮತ್ತು ಸ್ನೇಹಿತರಿಗೆ ಕರೆ ಮಾಡಿ ₹50 ಸಾವಿರ ಸಾಲ ಪಡೆದುಕೊಂಡರು. ಆರೋಪಿಗಳಲ್ಲಿ ಒಬ್ಬಾತ ಮೊಬೈಲ್ ಫೋನ್‌ ಅಂಗಡಿಗೆ ವಿದ್ಯಾರ್ಥಿಯೊಬ್ಬರನ್ನು ಕರೆದುಕೊಂಡು ಹೋಗಿ, ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡಿಸಿ, ₹35 ಸಾವಿರವನ್ನು ಅಂಗಡಿ ಮಾಲೀಕನ ಖಾತೆಗೆ ವರ್ಗಾಯಿಸಿ ಬಳಿಕ, ಅಂಗಡಿ ಮಾಲೀಕನಿಂದ ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ ಎಂದು ವಿದ್ಯಾರ್ಥಿಗಳು ಹೇಳಿರುವುದಾಗಿ’ ಪೊಲೀಸರು ತಿಳಿಸಿದ್ದಾರೆ.

‘ವಿದ್ಯಾರ್ಥಿಗಳು ಮೂರು ಬಾರಿ ಮಾತ್ರ ವೇಗ ಮಿತಿ ಮೀರಿದ್ದರು. ಆದರೆ ಹಣ ಸುಲಿಗೆ ಮಾಡುವುದಕ್ಕಾಗಿ ಆರೋಪಿಗಳು ಸುಳ್ಳು ಆರೋಪ ಮಾಡಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.