ಬೆಂಗಳೂರು: ಕಣ್ಣು ತಂಪಾಗಿಸುವ ಫ್ಯಾಷನ್ ಶೋ, ಹುಬ್ಬೇರಿಸಿದ ನೃತ್ಯ, ಚೈತ್ರಾ ಜೆ. ಆಚಾರ್ ಅವರ ಮನ ಸೆಳೆದ ಹಾಡು, ಶೈನಿ ಅಲೆಕ್ಸಾಂಡರ್ ಅವರ ಆಭರಣದ ವಿವರಗಳು... ಇವೆಲ್ಲವನ್ನು ನೋಡಿ, ಕೇಳಿ, ಭಾಗವಹಿಸಿ ಆನಂದಿಸಿದ ಪ್ರೇಕ್ಷಕರು..
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ನ ಭೂಮಿಕಾ ಕ್ಲಬ್ ಕೋರಮಂಗಲ ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ 6ನೇ ಆವೃತ್ತಿಯ ಕಾರ್ಯಕ್ರಮ ಈ ಸಂಭ್ರಮಕ್ಕೆ ವೇದಿಕೆಯಾಯಿತು.
ಪಿ.ಸಿ.ಚಂದ್ರ ಜ್ಯುವೆಲರ್ಸ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಟ್ಟಿ ಕಾಫಿ ಹಾಗೂ ಐಎಫ್‌ಎಂ (ಫ್ಯಾಷನ್ ಶೋ ಪಾರ್ಟನರ್) ಪ್ರಾಯೋಜಕತ್ವ ನೀಡಿದ್ದವು.
ನಟಿಯೂ ಆಗಿರುವ ಗಾಯಕಿ ಚೈತ್ರಾ ಜೆ. ಆಚಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಡಬ್ಬಾ ಮಾತು ಸೃಷ್ಟಿಸಿದವರು ಯಾರು? ಒಂದು ಮನೆಯಲ್ಲಿ ತಾಯಿ, ಮಗಳು ಇದ್ದರೆ ಅವರು ಹೇಗೆ ಶತ್ರುಗಳು. ಇಲ್ಲಿ ಮಹಿಳೆಯರೇ ಹೆಚ್ಚಿದ್ದೇವೆ. ನಾವು ಪರಸ್ಪರ ಹೇಗೆ ಶತ್ರುಗಳು’ ಎಂದು ಅವರು ಪ್ರಶ್ನಿಸಿದರು.
‘ಹುಡುಗರು ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದರೆ, ಹುಡುಗಿಯರು 10 ಕ್ಷೇತ್ರಗಳಲ್ಲಿ ಸಾಧನೆ ಮಾಡಬಲ್ಲರು. ಅಷ್ಟು ಶಕ್ತಿ ಅವರಿಗಿದೆ’ ಎಂದು ಸ್ಫೂರ್ತಿಯ ಮಾತುಗಳನ್ನಾಡಿದರು.
‘ನಾನು ಎಂಜಿನಿಯರಿಂಗ್ ಮಾಡಿದ ಮೇಲೆ ಚಿತ್ರರಂಗಕ್ಕೆ ಹೋಗುತ್ತೀನಿ ಅಂದಾಗ ಹೆತ್ತವರಿಗೆ ತಲೆಬಿಸಿಯಾಯಿತು. ಇಷ್ಟೆಲ್ಲ ಹಣ ಖರ್ಚು ಮಾಡಿ ಓದಿಸಿದರೆ ಗೊತ್ತಿಲ್ಲದ ಕ್ಷೇತ್ರಕ್ಕೆ ಹೋಗುತ್ತಿದ್ದಾಳಲ್ಲ ಎಂಬುದು ಅವರ ಆತಂಕವಾಗಿತ್ತು. ಈಗ ಅವರಿಗೆ ನಂಬಿಕೆ ಬಂದಿದೆ’ ಎಂದು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.
‘ಸೋಜುಗದ ಸೂಜಿ ಮಲ್ಲಿಗೆ’ ಹಾಡು ಹಾಡಿ ರಂಜಿಸಿದರು. ತಾನು ಅಭಿನಯಿಸಿರುವ ‘ಸಪ್ತ ಸಾಗರದ ಆಚೆ’, ‘ಟೋಬಿ’ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಫ್ಯಾಷನ್ ಡಿಸೈನರ್ ಮತ್ತು ಸೈಲಿಸ್ಟ್ ಶೈನಿ ಅಲೆಕ್ಸಾಂಡರ್ ಅವರು ಆಭರಣಗಳ ವಿನ್ಯಾಸವನ್ನಷ್ಟೇ ತೆರೆದಿಟ್ಟಿದ್ದಲ್ಲದೇ ಯಾವ ಬಟ್ಟೆಗೆ ಯಾವ ರೀತಿಯ ಆಭರಣ ಧರಿಸಬೇಕು? ಯಾವ ಕಾರ್ಯಕ್ರಮಕ್ಕೆ ಯಾವ ಆಭರಣ ಒಳ್ಳೆಯದು ಎಂಬುದನ್ನು ವಿವರಿಸಿದರು. ಮನೆಯಲ್ಲಿ ಇರುವಾಗ ಧರಿಸುವ ಆಭರಣಗಳು, ಕೆಲಸಕ್ಕೆ ಹೋಗುವಾಗ, ಪಾರ್ಟಿಗೆ ಹೋಗುವಾಗ, ಮದುವೆಗೆ ಹೋಗುವಾಗ ಹೀಗೆ ಯಾವಾಗ ಏನು ಧರಿಸಬೇಕು ಎಂಬುದನ್ನು ತಿಳಿಸಿದರು.
ಜೆ.ಎನ್.ರವಿ ಅವರ ನಿರ್ದೇಶನ ಹಾಗೂ ಸಿರಿ ರಮೇಶ್ ಅವರ ನೃತ್ಯ ಸಂಯೋಜನೆಯಲ್ಲಿ ಐಎಫ್‌ಎಂ ಸಿನಿಮಾ ಸಂಸ್ಥೆಯ ರೂಪದರ್ಶಿಯರು ನಡೆಸಿಕೊಟ್ಟ ಜ್ಯುವೆಲರ್ಸ್ ಫ್ಯಾಷನ್ ಶೋ ಎಲ್ಲರ ಗಮನ ಸೆಳೆಯಿತು. ವಿವಿಧ ಆಭರಣ ಧರಿಸಿದ ಯುವತಿಯರು ಇಂಪಾದ ಹಿನ್ನೆಲೆ ಸಂಗೀತಕ್ಕೆ ಹೆಜ್ಜೆ ಹಾಕಿದರು.
ತಾರಕ್ ನೃತ್ಯ ಅಕಾಡೆಮಿಯ ಕಲಾವಿದರು ಬೆರಗುಗೊಳಿಸುವಂತೆ ನೃತ್ಯ ಮಾಡಿದ್ದಲ್ಲದೇ ಪ್ರೇಕ್ಷಕರನ್ನೂ ಕುಣಿಯುವಂತೆ ಮಾಡಿದರು. ನಿರೂಪಕಿ ಪ್ರತಿಭಾ ಗೌಡ ಪ್ರೇಕ್ಷಕರಿಗೆ ವಿವಿಧ ಆಟಗಳನ್ನು ಆಡಿಸಿ ಹುರಿದುಂಬಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.