ಬೆಂಗಳೂರು: ವಿಜಯಪುರದ ಬಿಎಲ್‌ಡಿಇ ಶಿಕ್ಷಣ ಸಂಸ್ಥೆಗಳ ಸಮೂಹದ ವಚನ ಪಿತಾಮಹ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮತ್ತೊಂದು ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆಯಲಾಗುತ್ತಿದೆ.
ನಗರದಲ್ಲಿ ಬುಧವಾರ ಗೊ.ರು.ಚನ್ನಬಸಪ್ಪ, ಎಸ್.ಜಿ.ಸಿದ್ದರಾಮಯ್ಯ, ಟಿ.ಆರ್. ಚಂದ್ರಶೇಖರ, ಅಶೋಕ ದೊಮ್ಮಲೂರು ಅವರ ಜತೆ ಚರ್ಚೆ ನಡೆಸಿದ ನಂತರ ಸಂಸ್ಥೆಯ ಪೋಷಕರೂ ಆಗಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಈ ಮಾಹಿತಿ ನೀಡಿದರು.
ಕೇಂದ್ರದ ರೂಪುರೇಷೆಗಳ ಚೌಕಟ್ಟನ್ನು ಸಿದ್ಧಪಡಿಸುವ ಹೊಣೆಯನ್ನು ಅಶೋಕ ದೊಮ್ಮಲೂರು ಅವರಿಗೆ ವಹಿಸಲಾಗಿದೆ. ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸಂಶೋಧನೆ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ವಚನಗಳ ಅಧ್ಯಯನಕ್ಕೆ ಶಾಸ್ತ್ರೀಯ ನೆಲೆಯನ್ನು ರೂಪಿಸಿದ ಹಿರಿಮೆ ಹಳಕಟ್ಟಿ ಅವರದಾಗಿದೆ. ಅವರು ಬಿಎಲ್‌ಡಿಇ ಶಿಕ್ಷಣ ಸಂಸ್ಥೆಗಳ ಸ್ಥಾಪಕರಲ್ಲಿ ಒಬ್ಬರು. ಅವರ ಹೆಸರಿನ ಸಂಶೋಧನಾ ಕೇಂದ್ರವು ವಚನ ಸಾಹಿತ್ಯದ ಕುರಿತು ಅರ್ಥಪೂರ್ಣ ಚಟುವಟಿಕೆ ನಡೆಸಿಕೊಂಡು ಬಂದಿದೆ ಎಂದು ವಿವರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.