ಬೆಂಗಳೂರು: ಕಾಯಿಲೆಗಳನ್ನು ಸಂಪೂರ್ಣ ಗುಣಪಡಿಸುವ ಆಯುರ್ವೇದ ಚಿಕಿತ್ಸೆ ಕೊಡಿಸುವುದಾಗಿ ವೃದ್ಧರನ್ನು ಮನವೊಲಿಸಿ, ನಕಲಿ ಔಷಧಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಆರು ಮಂದಿ ಆರೋಪಿಗಳನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರದ ಸಂಜಿತ್ (30), ಮಂಜುನಾಥ್ (40), ಶಿವಲಿಂಗ (42), ರಮಾಕಾಂತ್ (37), ಕಿಶನ್ (23) ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕಲ್ಲೋಳಪ್ಪ ಗುರಪ್ಪ (63) ಬಂಧಿತ ಆರೋಪಿಗಳು.
‘ವಯೋಸಹಜ ಕಾಯಿಲೆಗಳನ್ನು ಗುಣಪಡಿಸಲಾಗುವುದು ಎಂದುಆರೋಪಿಗಳು ವೃದ್ಧರನ್ನು ಮನವೊಲಿಸಿ, ನಕಲಿ ಆಯುರ್ವೇದ ಔಷಧಗಳನ್ನು ಮಾರಾಟ ಮಾಡುತ್ತಿದ್ದರು. ಇದರಿಂದ ಲಕ್ಷಗಟ್ಟಲೆ ಹಣ ಸಂಪಾದಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
ರವಿ ಅನುಕರ್ ಎಂಬುವರು ಕಾಲು ಮತ್ತು ಸೊಂಟ ನೋವಿಗೆ ಚಿಕಿತ್ಸೆ ಪಡೆಯಲು ಜಯನಗರದ ಕ್ಲಿನಿಕ್‌ವೊಂದಕ್ಕೆ ತೆರಳಿದ್ದರು. ಇದೇ ವೇಳೆ ಹೊರಗೆ ನಿಂತಿದ್ದ ಆರೋಪಿಗಳು, ರವಿ ಅವರನ್ನು ಪರಿಚಯಿಸಿಕೊಂಡಿದ್ದರು. ರಾಜಾಜಿನಗರದ ಧನ್ವಂತರಿ ಆಯುರ್ವೇದ ಕೇಂದ್ರದಲ್ಲಿ ನಮ್ಮ ಸಹೋದರ ಕೆಲಸ ಮಾಡುತ್ತಿದ್ದು, ಎಲ್ಲ ರೀತಿಯ ಖಾಯಿಲೆಗಳನ್ನು ಗುಣಪಡಿಸುತ್ತಾರೆ ಎಂದುಕ್ಲಿನಿಕ್ ಮಾದರಿಯಲ್ಲಿದ್ದ ಸ್ಥಳಕ್ಕೆ ಕರೆದೊಯ್ದಿದ್ದರು.
ಕ್ಲಿನಿಕ್‌ನಲ್ಲಿದ್ದ ಆರೋಪಿಗಳನ್ನೇ ಅವರು ವೈದ್ಯರು ಹಾಗೂ ಕೆಲಸಗಾರರು ಎಂದು ನಂಬಿಸಿದ್ದರು. ಬಳಿಕ ಕಾಯಿಲೆ ಗುಣಪಡಿಸಲು ₹2.59 ಲಕ್ಷ ಖರ್ಚಾಗುತ್ತದೆ. ಒಂದು ವೇಳೆ ಸಮಸ್ಯೆ ನಿವಾರಣೆಯಾಗದಿದ್ದರೆ, ಎಲ್ಲ ಹಣ ವಾಪಸ್ ನೀಡುವುದಾಗಿ ತಿಳಿಸಿದ್ದರು. ಇದನ್ನು ನಂಬಿದ್ದ ರವಿ, ಚೆಕ್ ಮೂಲಕ ₹2.50 ಲಕ್ಷ ಹಾಗೂ ₹9,850 ನಗದು ಪಾವತಿಸಿ ಔಷಧ ಪಡೆದುಕೊಂಡಿದ್ದರು.
‘ಔಷಧ ಬಳಸಿದರೂ ಖಾಯಿಲೆ ಗುಣವಾಗದೆ ಇದ್ದುದರಿಂದ ವಿಚಾರಿಸಲು ಕ್ಲಿನಿಕ್ ಬಳಿ ತೆರಳಿದಾಗ ಬಾಗಿಲು ಮುಚ್ಚಿತ್ತು. ಸ್ಥಳೀಯರನ್ನು ವಿಚಾರಿಸಿದಾಗ ಮೋಸಹೋಗಿರುವುದು ತಿಳಿಯಿತು ಎಂದು ರವಿ ಅವರು ದೂರಿನಲ್ಲಿ ತಿಳಿಸಿದ್ದಾರೆ.’
‘ಆರೋಪಿಗಳು ನಕಲಿ ಔಷಧದ ಮಾರಾಟದಿಂದ ಸಂಪಾದಿಸಿದ್ದ ₹5 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಆರೋಪಿಗಳ ಪೈಕಿಕಲ್ಲೋಳಪ್ಪ ಗುರಪ್ಪನನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದು, ಉಳಿದವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆ ಮುಂದುವರೆದಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.