ಬೆಂಗಳೂರು: ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲೇ ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸುತ್ತಿದ್ದ ಪ್ರಕರಣ ಬಯಲಾಗಿದ್ದು, ಕೃತ್ಯದಲ್ಲಿ ತೊಡಗಿದ್ದ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ.
ಮಂಜುನಾಥ್ ಹಾಗೂ ನಾರಾಯಣಸ್ವಾಮಿ ಅಮಾನತಾದವರು. ಈ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳು ಇದುವರೆಗೆ 160 ಮಂದಿಗೆ ನಕಲಿ ಪ್ರಮಾಣ ಪತ್ರ ಕೊಟ್ಟಿರುವುದು ತನಿಖೆಯಿಂದ ಗೊತ್ತಾಗಿದೆ. ಅವರಿಬ್ಬರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹೆಡ್ ಕಾನ್‌ಸ್ಟೆಬಲ್‌ಗಳು ಹಲವು ದಿನಗಳಿಂದ ನಕಲಿ ಹಾಲೋಗ್ರಾಮ್ ಸ್ಟಿಕ್ಕರ್ ಬಳಸಿಕೊಂಡು ಪ್ರಮಾಣ ಪತ್ರಗಳನ್ನು ಸಿದ್ಧಪಡಿಸುತ್ತಿದ್ದರು. ಅಗತ್ಯವಿರುವ ವ್ಯಕ್ತಿಗಳಿಗೆ ಅವುಗಳನ್ನು ಕೊಟ್ಟು ಹಣ ಪಡೆಯುತ್ತಿದ್ದರು. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ತನಿಖೆ ನಡೆಸಿ ಅವರ ಕೃತ್ಯವನ್ನು ಪತ್ತೆ ಹಚ್ಚಲಾಯಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಕಲಿ ಪ್ರಮಾಣ ಪತ್ರಗಳ ಸಮೇತ ಕಮಿಷನರ್ ಟಿ.ಸುನೀಲ್‌ಕುಮಾರ್ ಅವರಿಗೆ ವರದಿ ನೀಡಲಾಗಿತ್ತು. ಅದನ್ನು ಪರಿಶೀಲಿಸಿದ್ದ ಕಮಿಷನರ್, ಹೆಡ್ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ, ಇವರ ಜೊತೆ ಅಕ್ರಮದಲ್ಲಿ ಕೈ ಜೋಡಿಸಿದ್ದವರ ಪತ್ತೆಗೂ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದರು.
ಹಣದಾಸೆಗಾಗಿ ಕೃತ್ಯ: ‘ಶೈಕ್ಷಣಿಕ, ಉದ್ಯೋಗ ಸೇರಿದಂತೆ ವಿವಿಧ ಬಗೆಯ ಕೆಲಸಗಳಿಗೆ ಪೊಲೀಸರ ಪರಿಶೀಲನಾ ಪ್ರಮಾಣ ಪತ್ರ ಅಗತ್ಯವಿರುತ್ತದೆ. ಅಂಥ ಪತ್ರ ಪಡೆಯಲು ನಿತ್ಯವೂ ನೂರಾರು ಮಂದಿ ಕಮಿಷನರ್ ಕಚೇರಿಗೆ ಬಂದು ಹೋಗುತ್ತಾರೆ. ಪತ್ರ ವಿತರಿಸಲು ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಅಲ್ಲಿಯೇ ಹೆಡ್ ಕಾನ್‌ಸ್ಟೆಬಲ್‌ಗಳಾದಮಂಜುನಾಥ್ ಹಾಗೂ ನಾರಾಯಣಸ್ವಾಮಿ ಕರ್ತವ್ಯ ನಿರ್ವಹಿಸುತ್ತಿದ್ದರು’ ಎಂದು ಹಿರಿಯ ಅಧಿಕಾರಿ ಹೇಳಿದರು.
‘ಕೌಂಟರ್‌ಗೆ ಬರುತ್ತಿದ್ದ ಕೆಲ ಜನ, ತ್ವರಿತವಾಗಿ ಪ್ರಮಾಣ ಪತ್ರ ನೀಡುವಂತೆ ಕೇಳುತ್ತಿದ್ದರು. ಅವರ ಅಗತ್ಯತೆ ತಿಳಿದುಕೊಂಡ ಹೆಡ್ ಕಾನ್‌ಸ್ಟೆಬಲ್‌ಗಳು, ಹೆಚ್ಚುವರಿ ಹಣ ವಸೂಲಿ ಮಾಡಿ ನಕಲಿ ಹಾಲೋ ಗ್ರಾಮ್ ಸ್ಟಿಕ್ಕರ್ ಇರುವ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದರು’ ಎಂದರು.
‘ಯಾರ‍್ಯಾರಿಗೆ ನಕಲಿ ಪ್ರಮಾಣ ಪತ್ರ ನೀಡಲಾಗಿದೆ ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ. ಜೊತೆಗೆ, ಹೆಡ್‌ಕಾನ್‌ಸ್ಟೆಬಲ್‌ಗಳ ವಿರುದ್ಧ ವಿಧಾನಸೌಧ ಠಾಣೆಗೆ ದೂರು ನೀಡಲಾಗಿದೆ. ಅಲ್ಲಿಯ ಪೊಲೀಸರೇ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.