ADVERTISEMENT

ಟ್ರಾಫಿಕ್‌ ಪೊಲೀಸರು ಸಂಗ್ರಹಿಸಿದ ದಂಡದ ಹಣದಲ್ಲಿ ‘ಖೋಟಾ’ ನೋಟು ಪತ್ತೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 20:51 IST
Last Updated 27 ಮಾರ್ಚ್ 2022, 20:51 IST
ಪತ್ತೆಯಾದ 500 ಮುಖಬೆಲೆಯ ಖೋಟಾ ನೋಟು
ಪತ್ತೆಯಾದ 500 ಮುಖಬೆಲೆಯ ಖೋಟಾ ನೋಟು   

ಬೆಂಗಳೂರು: ರಸ್ತೆ ಸಂಚಾರ ನಿಯಮ ಉಲ್ಲಂಘಿಸುವ ಜನರಿಂದ ಸಂಗ್ರಹಿಸುತ್ತಿರುವ ದಂಡದ ಹಣದಲ್ಲಿ ‘ಖೋಟಾ’ ನೋಟುಗಳು ಪತ್ತೆಯಾಗುತ್ತಿದ್ದು, ಸಂಚಾರ ಪೊಲೀಸರನ್ನು ಚಿಂತೆಗೀಡು ಮಾಡಿದೆ.

ನಗರದಲ್ಲಿ ವಾಹನಗಳ ದಟ್ಟಣೆ ಸಾಮಾನ್ಯವಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವರ ಸಂಖ್ಯೆಯೂ ಹೆಚ್ಚುತ್ತಿದೆ. ಅಂಥವರಿಗೆ ದಂಡ ವಿಧಿಸುವ ಜವಾಬ್ದಾರಿ ಸಂಚಾರ ಪೊಲೀಸರ ಮೇಲಿದೆ. ರಸ್ತೆ ಹಾಗೂ ಪ್ರಮುಖ ಸ್ಥಳಗಳಲ್ಲಿ ವಾಹನಗಳನ್ನು ತಡೆದು ಪೊಲೀಸರು, ದಂಡ ವಸೂಲಿ ಮಾಡುತ್ತಿದ್ದಾರೆ.

ಪೊಲೀಸರಿಗೆ ಸಿಕ್ಕಿ ಬೀಳುವ ಕೆಲವರು, ದಂಡ ಪಾವತಿಗೆ ಖೋಟಾ ನೋಟುಗಳನ್ನು ನೀಡುತ್ತಿದ್ದಾರೆ. ರಶೀದಿ ನೀಡುವ ಭರದಲ್ಲಿ ನೋಟು ಪರಿಶೀಲಿಸುವುದನ್ನೇ ಪೊಲೀಸರು ಮರೆಯುತ್ತಿದ್ದಾರೆ. ದಂಡದ ಹಣವನ್ನು ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸುವ ವೇಳೆಯಲ್ಲಿ ಖೋಟಾ ನೋಟುಗಳು ಪತ್ತೆಯಾಗುತ್ತಿವೆ.

ADVERTISEMENT

ದಂಡ ವಸೂಲಿ ಮಾಡಿದ್ದ ಅಧಿಕಾರಿಯೇ, ಖೋಟಾ ನೋಟುಗಳನ್ನು ಹರಿದುಹಾಕಿ ಅಸಲಿ ನೋಟುಗಳನ್ನು ನೀಡುತ್ತಿದ್ದಾರೆ. ಇದರಿಂದ ಅವರ ಜೇಬಿಗೂ ಕತ್ತರಿ ಬೀಳುತ್ತಿದೆ.

‘ಹಿರಿಯ ಅಧಿಕಾರಿಗಳ ಸೂಚನೆಯಂತೆ ಆಯ್ದ ಸ್ಥಳಗಳಲ್ಲಿ ನಿಂತು ದಂಡ ವಸೂಲಿ ಮಾಡುತ್ತೇವೆ. ನಿಯಮಗಳನ್ನು (ಹೆಲ್ಮೆಟ್ ಹಾಕದಿರುವುದು, ಸಿಗ್ನಲ್ ಜಂಪ್, ಮೊಬೈಲ್‌ನಲ್ಲಿ ಮಾತನಾಡುತ್ತ ಚಾಲನೆ ಮುಂತಾದುವು) ಉಲ್ಲಂಘನೆ ಕಂಡುಬಂದಾಗ ವಾಹನ ತಡೆದು ತಪಾಸಣೆ ನಡೆಸುತ್ತೇವೆ. ಚಾಲಕರಿಂದ ದಂಡ ವಸೂಲಿ ಮಾಡುತ್ತೇವೆ. ಕೆಲವರು ಖೋಟಾ ನೋಟುಗಳನ್ನು ಕೊಟ್ಟು ವಂಚಿಸುತ್ತಿದ್ದಾರೆ’ ಎಂದು ಸಂಚಾರ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರು ಹೇಳಿದರು.

‘ದಂಡ ತೆರಲು ನೀಡಿದ ನೋಟುಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡುವುದಿಲ್ಲ. ಜನರನ್ನು ನಂಬಿ ಪಡೆದುಕೊಳ್ಳುತ್ತೇವೆ. ಖೋಟಾ ನೋಟುಗಳು ಸೇರಿಕೊಂಡಿರುವುದು ದಂಡದ ಮೊತ್ತವನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸುವಾಗ ಪತ್ತೆಯಾಗುತ್ತಿದೆ’ ಎಂದೂ ತಿಳಿಸಿದರು.

‘₹ 500, ₹ 2,000 ಮುಖಬೆಲೆಯ ಖೋಟಾ ನೋಟುಗಳು ಹಲವು ಬಾರಿ ಸಿಕ್ಕಿವೆ. ಅಂಥ ನೋಟುಗಳನ್ನು ಹರಿದು ಹಾಕಿ, ಅಷ್ಟೇ ಮೊತ್ತವನ್ನು ಕೈಯಿಂದ ಪಾವತಿಸಿದ್ದೇವೆ’ ಎಂದೂ ಹೇಳಿದರು.

ಪರಿಶೀಲಿಸಲು ಸೂಚನೆ: ಸಂಚಾರ ವಿಭಾಗದ ಅಧಿಕಾರಿಯೊಬ್ಬರು, ‘ದಂಡ ಪಡೆಯುವ ವೇಳೆಯಲ್ಲೇ ನೋಟು ಪರಿಶೀಲನೆ ನಡೆಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಖೋಟಾ ನೋಟು ಕೊಡುವವರನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳುವಂತೆಯೂ ತಿಳಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.