ADVERTISEMENT

ಬೆಂಗಳೂರು | ಆರೋಪಿ ಜಾಮೀನಿಗೆ ನಕಲಿ ದಾಖಲೆ: ಇಬ್ಬರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 0:30 IST
Last Updated 29 ಜುಲೈ 2024, 0:30 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಆರೋಪಿಯೊಬ್ಬರಿಗೆ ಜಾಮೀನು ಮಂಜೂರಾತಿ ಸಂದರ್ಭದಲ್ಲಿ ಭದ್ರತೆ ನೀಡಲು ನಗರದ ನಾಲ್ಕನೇ ತ್ವರಿತ ವಿಶೇಷ ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣ ಪತ್ರ ನೀಡಿದ್ದ ಆರೋಪದ ಮೇಲೆ ಇಬ್ಬರ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಫಿರ್ದೋಸ್‌ ಎಂಬುವವರಿಗೆ ನಗರದ ನಾಲ್ಕನೇ ತ್ವರಿತ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಮಂಜೂರಾಗಿತ್ತು. ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಪೂರೈಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಲಿಂಗಪುರ ಗ್ರಾಮದ ಆಂಜನಪ್ಪ (38), ದೊಡ್ಡಬಳ್ಳಾಪುರ ತಾಲ್ಲೂಕಿನ ವೀರಪುರ ಗ್ರಾಮದ ರಾಮಚಂದ್ರಪ್ಪ (37) ಎಂಬುವವರು ಭದ್ರತೆ ಒದಗಿಸಿದ್ದರು. ಈ ಇಬ್ಬರೂ ಆರೋಪಿಗಳು ನಕಲಿ ಆಧಾರ್‌ ಕಾರ್ಡ್‌ ಹಾಗೂ ಸುಳ್ಳು ಪ್ರಮಾಣ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣ ಪತ್ರಗಳನ್ನು ಸಲ್ಲಿಸಿದ ಆರೋಪದ ಮೇಲೆ ಇವರಿಬ್ಬರನ್ನೂ ಬಂಧಿಸುವಂತೆ ಸಿಟಿ ಸಿವಿಲ್‌ ನ್ಯಾಯಾಲಯದ ಸಹಾಯಕ ರಿಜಿಸ್ಟ್ರಾರ್ ದೂರು ನೀಡಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಜಾಮೀನಿಗಾಗಿ ಭದ್ರತೆ ನೀಡಿದ್ದ ಆಂಜನಪ್ಪ ಹಾಗೂ ರಾಮಚಂದ್ರಪ್ಪ ಅವರ ವಿಳಾಸವನ್ನು ಖಚಿತಪಡಿಸಿಕೊಳ್ಳಲು ವಿಲ್ಸನ್‌ ಗಾರ್ಡನ್‌ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದರು. ಆರೋಪಿಗಳು ನ್ಯಾಯಾಲಯಕ್ಕೆ ನೀಡಿದ್ದ ಆಧಾರ್‌ ಕಾರ್ಡ್‌ಗಳು ಹಾಗೂ ಭೂ ದಾಖಲಾತಿಗಳಲ್ಲಿ ವ್ಯಾತ್ಯಾಸ ಕಂಡು ಬಂದಿತ್ತು’ ಎಂದು ಪೊಲೀಸರು ತಿಳಿಸಿದರು.

‘ಬೇರೆಯವರ ಹೆಸರಿನಲ್ಲಿರುವ ಜಮೀನು ಒಡೆತನದ ದಾಖಲಾತಿಗಳು, ಪ್ರಮಾಣ ಪತ್ರಗಳು ಹಾಗೂ ನಕಲಿ ಆಧಾರ್‌ ಕಾರ್ಡ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪಿ ಫಿರ್ದೋಸ್‌ ಜಾಮೀನು ಪಡೆಯಲು ಸಹಕರಿಸಿದ್ದರು. ಆದ್ದರಿಂದ, ಇವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಆಧಾರ್‌ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.