ADVERTISEMENT

ಚಂದ್ರಪ್ಪ ವಿರುದ್ಧ ಸುಳ್ಳು ಪ್ರಮಾಣ ಪತ್ರ: ಇಬ್ಬರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 14:36 IST
Last Updated 20 ಮಾರ್ಚ್ 2024, 14:36 IST
ಬಿ.ಎನ್‌.ಚಂದ್ರಪ್ಪ
ಬಿ.ಎನ್‌.ಚಂದ್ರಪ್ಪ   

ಬೆಂಗಳೂರು: ‘ಶಾಲಾ ದಾಖಲಾತಿ ಹಾಗೂ ಜಾತಿ ಪ್ರಮಾಣ ಪತ್ರವನ್ನು ನಕಲು ಮಾಡಿ ಷಡ್ಯಂತ್ರ ನಡೆಸಲಾಗುತ್ತಿದೆ’ ಎಂದು ಆರೋಪಿಸಿ, ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ನೀಡಿದ ದೂರು ಆಧರಿಸಿ, ಇಬ್ಬರ ವಿರುದ್ದ ಹಲಸೂರುಗೇಟ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಚಿತ್ರದುರ್ಗದ ಕೆಇಬಿ ಹೌಸ್‌ನ ಗೋಪಾಲಪುರ ರಸ್ತೆಯ ರಾಜಪ್ಪ ಹಾಗೂ ಚಳ್ಳಕೆರೆ ತಾಲ್ಲೂಕು ಅಬ್ಬೇನಹಳ್ಳಿಯ ಬಾಬು ಎಂಬುವರ ಹೆಸರು ಎಫ್‌ಐಆರ್‌ನಲ್ಲಿದೆ.

‘2014ರ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದೆ. 2019ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಸೋಲು ಅನುಭವಿಸಿದ್ದೆ. ಈ ಬಾರಿಯೂ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದೇನೆ. ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಹಲವು ಆಕಾಂಕ್ಷಿಗಳಿದ್ದಾರೆ. ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ನನ್ನ ಜಾತಿಯನ್ನು ಆದಿ ಕರ್ನಾಟಕದ ಬದಲಾಗಿ ಮಾಸಾಳ ಎಂದು ಬಿಂಬಿಸಿ ಶಾಲಾ ವರ್ಗಾವಣೆ ಪತ್ರದ ನಕಲಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಪ್ರಮಾಣ ಪತ್ರಗಳನ್ನು ಹರಿಯಬಿಡಲಾಗಿದೆ. ಕೆಲವು ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಆರೋಪಿಗಳು, ನಕಲಿ ದಾಖಲೆಗಳು ಹಾಗೂ ಮುದ್ರೆಯನ್ನು ಸೃಷ್ಟಿಸಿಕೊಂಡು ಜಾತಿ ಪ್ರಮಾಣ ಪತ್ರವನ್ನು ತಯಾರಿಸಿ ಅಸಲಿ ಎಂದು ಬಿಂಬಿಸಿ ತೇಜೋವಧೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.

‘ಹತ್ತು ವರ್ಷಗಳಿಂದ ಷಡ್ಯಂತ್ರ ನಡೆಸಲಾಗುತ್ತಿದೆ’ ಎಂದು ಚಂದ್ರಪ್ಪ ಅವರು ಕಾಂಗ್ರೆಸ್‌ ಹೈಕಮಾಂಡ್‌ ಗಮನಕ್ಕೆ ತಂದಿದ್ದರು. ಹೈಕಮಾಂಡ್‌ ಸೂಚನೆ ಹಾಗೂ ಕಾನೂನು ತಜ್ಞರ ಸಲಹೆ ಮೇರೆಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.